ಮನುಷ್ಯನ ಎಂದ ಮೇಲೆ ಅನೇಕ ರೋಗಗಳು ಬರುತ್ತವೆ. ಕೆಲವು ಕಾಯಿಲೆಗಳು ದೊಡ್ಡ ಪ್ರಮಾಣದ್ದಾ ಗಿದ್ದರೆ, ಇನ್ನೂ ಕೆಲವು ಸಣ್ಣ ಪುಟ್ಟ ಕಾಯಿಲೆಗಳಾಗಿರುತ್ತವೆ. ಸಣ್ಣಪುಟ್ಟ ಕಾಯಿಲೆಗಳಿಗೆ ಮನೆ ಔಷಧಿಯ ಮೂಲಕವೇ ಕಡಿಮೆ ಮಾಡಬಹುದು. ಇನ್ನೂ ಕೆಲವು ಕಾಯಿಲೆಗಳಿಗೆ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲೇ ಬೇಕಾಗುವುದು. ಕೆಲವೊಮ್ಮೆ ಸಣ್ಣ ಕಾಯಿಲೆ ಎಂದು ನಿರ್ಲಕ್ಷ ಮಾಡಿದರೆ ಅದು ಗಂಭೀರ ಸಮಸ್ಯೆಗಳಾಗಿ ಪರಿವರ್ತನೆ ಹೊಂದಬಹುದು.
ನಮ್ಮ ಶರೀರವು ಆರೋಗ್ಯವಾಗಿ ಇರಬೇಕು ಎಂದಾದರೆ ಮೊದಲು ನಾವು ಸೇವಿಸುವ ಆಹಾರ ಹಾಗೂ ನಮ್ಮ ಹವ್ಯಾಸಗಳು ಆರೋಗ್ಯ ಪೂರ್ಣವಾಗಿರಬೇಕು. ಇಲ್ಲವಾದರೆ ಪದೇ ಪದೇ ಆರೋಗ್ಯ ಸಮಸ್ಯೆಯು ಕಾಣಿಸಿಕೊಳ್ಳುತ್ತವೆ. ಸಣ್ಣ ರೋಗ ಎಂದು ಎಂದಿಗೂ ಅಸಡ್ಡೆ ತೋರಬಾರದು. ಸಮಸ್ಯೆಯೂ ಚಿಕ್ಕದಾಗಿದ್ದರೂ ಗುಣಮುಖವಾಗುತ್ತಿಲ್ಲ ಎಂದಾದಾಗ ಮೊದಲು ವೈದ್ಯರಲ್ಲಿ ಪರೀಕ್ಷಿಸಬೇಕು. ಕೆಲವೊಮ್ಮೆ ಸಣ್ಣ ಸಮಸ್ಯೆಯು ಶಸ್ತ್ರ ಚಿಕಿತ್ಸೆ ಮಾಡುವಂತಹ ಸಮಸ್ಯೆಗಳನ್ನು ತಂದೊಡ್ಡುವುದು.
ಪುರುಷರಿಗೆ ಸತಾಯಿಸುವ ಅನೇಕ ಆರೋಗ್ಯ ಸಮಸ್ಯೆಗಳಲ್ಲಿ ‘ಮೂತ್ರದಲ್ಲಿ ರಕ್ತ’ಕೂಡ ಒಂದು. ಇದನ್ನು ವೈದ್ಯಕೀಯ ಭಾಷೆಯಲ್ಲಿ ‘ಹೆಮಟುರಿಯಾ’ಎಂದು ಕರೆಯುತ್ತಾರೆ. ಪುರುಷರಲ್ಲಿ ಹೀಗೆ ಹೆಮಟುರಿಯಾ ಕಾಣಿಸಿಕೊಳ್ಳುವುದಕ್ಕೆ ಕಾರಣಗಳಿದ್ದು, ಅದು ಏಕೆ ಕಾಣಿಸಿಕೊಳ್ಳುತ್ತದೆ? ಲಕ್ಷಣಗಳೇನು? ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು ಎಂಬ ಮಾಹಿತಿ ನೋಡೋಣ.
ಪುರುಷರ ಮೂತ್ರದಲ್ಲಿ ರಕ್ತ ಕಂಡು ಬರಲು ಕಾರಣಗಳು
ಪ್ರಾಸ್ಟೇಟ್ ಗ್ರಂಥಿ ವಿಸ್ತರಣೆ
ಪ್ರಾಸ್ಟೇಟ್ ಗ್ರಂಥಿ ಪುರುಷರ ಸಂತಾನೋತ್ಪತ್ತಿ ವ್ಯವಸ್ಥೆಯ ಭಾಗವಾಗಿದ್ದು, ವೀರ್ಯವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಇದು ಗುದನಾಳದ ಮುಂದೆ ಇರುತ್ತದೆ. ಯಾವಾಗ ಪ್ರಾಸ್ಟೇಟ್ ಗ್ರಂಥಿ ವಿಸ್ತರಿಸುತ್ತದೆ ಯೋ ಆಗ ಮೂತ್ರನಾಳದ ಮೇಲೆ ಒತ್ತುವ ಮೂಲಕ ಮೂತ್ರ ವಿಸರ್ಜನೆಗೆ ಕಷ್ಟವಾಗುತ್ತದೆ. ಇದು ಹಾನಿ ಮತ್ತು ರಕ್ತಸ್ರಾವಕ್ಕೆ ಕಾರಣವಾಗಬಹುದು.
51-60 ವರ್ಷ ವಯಸ್ಸಿನ ವಯಸ್ಕ ಪುರುಷರಲ್ಲಿ ಶೇ.50ರಷ್ಟು ಮತ್ತು 80 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಶೇ 90ರಷ್ಟು ಜನರು ಈ ಸಮಸ್ಯೆಗೆ ಸಿಲುಕುತ್ತಾರೆ. ಆಗಾಗ್ಗೆ ಮೂತ್ರ ವಿಸರ್ಜನೆ, ವಿಶೇಷವಾಗಿ ರಾತ್ರಿಯಲ್ಲಿ. ಮೂತ್ರ ವಿಸರ್ಜನೆ ಪ್ರಾರಂಭಿಸುವಾಗ ತೊಂದರೆ, ಮೂತ್ರ ವಿಸರ್ಜಿಸುವಾಗ ತಳ್ಳುವುದು ಅಥವಾ ತಗ್ಗಿಸುವುದು, ಮೂತ್ರದಲ್ಲಿ ರಕ್ತ, ತೀವ್ರತರವಾಗಿದ್ದರೆ ಮೂತ್ರ ವಿಸರ್ಜಿಸಲು ಸಾಧ್ಯವಾಗುವುದಿಲ್ಲ ಇದೆಲ್ಲಾ ನಿಮಗೆ ಪ್ರಾಸ್ಟೇಟ್ ಗ್ರಂಥಿ ವಿಸ್ತರಿಸಿದಾಗ ಕಂಡುಬರುವ ಲಕ್ಷಣಗಳು.
ಮೂತ್ರದ ಕ್ಯಾತಿಟರ್ ಗೆ ಸೋಂಕಾದಾಗ
ಕೆಲವರಿಗೆ ಗಾಯ, ಶಸ್ತ್ರಚಿಕಿತ್ಸೆ ಅಥವಾ ಕಾಯಿಲೆಯಾದಾಗ ಮೂತ್ರ ವಿಸರ್ಜಿಸಲು ತೊಂದರೆಯಾಗ ಬಹುದು. ಆದರೆ ಮೂತ್ರದ ಕ್ಯಾತಿಟರ್ ಮೂತ್ರದ ಸೋಂಕಿಗೆ (ಸಿಎಯುಟಿಐ) ಕಾರಣವಾದಾಗ ಮೂತ್ರದಲ್ಲಿ ರಕ್ತ ಬರಬಹುದು. ಸಿಎಯುಟಿಐ ಲಕ್ಷಣಗಳು ಸಾಮಾನ್ಯವಾಗಿ ಯುಟಿಐನಂತೆ ಇರುತ್ತದೆ. ಹಾಗೆಯೇ ಕೆಳ ಬೆನ್ನಿನಲ್ಲಿ ಅಥವಾ ಹೊಟ್ಟೆಯಲ್ಲಿ ಸೆಳೆತ ಉಂಟಾಗುತ್ತದೆ.
ಯುವಕರಲ್ಲಿ ದೀರ್ಘಕಾಲದ ಜಿಎನ್
‘ಗ್ಲೊಮೆರುಲಿ’ಮೂತ್ರಪಿಂಡದೊಳಗೆ ಸಣ್ಣ ರಚನೆಯಾಗಿದ್ದು, ರಕ್ತವನ್ನು ಫಿಲ್ಟರ್ ಮಾಡಲು ಮತ್ತು ಸ್ವಚ್ಛ ಗೊಳಿಸಲು ಸಹಾಯ ಮಾಡುತ್ತದೆ. ಗ್ಲೊಮೆರುಲೋನೆಫ್ರಿಟಿಸ್ (ಜಿಎನ್) ಇರುವವರಲ್ಲಿ ಗಾಯಗೊಂಡ ಮೂತ್ರಪಿಂಡಗಳು ದೇಹದಿಂದ ತ್ಯಾಜ್ಯ ಮತ್ತು ಹೆಚ್ಚುವರಿ ದ್ರವವನ್ನು ತೆಗೆದುಹಾಕಲು ಸಾಧ್ಯವಾಗುವುದಿಲ್ಲ. ಆಗ ಚಿಕಿತ್ಸೆಯಿಲ್ಲದ ಜಿಎನ್ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದು. ದೀರ್ಘಕಾಲದ ಜಿಎನ್ ಸಾಮಾನ್ಯವಾಗಿ ಯುವಕರಲ್ಲಿ ಕಂಡುಬರುತ್ತದೆ. ಅಂತಹವರು ಶ್ರವಣ ಮತ್ತು ದೃಷ್ಟಿ ಕಳೆದುಕೊಳ್ಳುತ್ತಾರೆ. ತೀವ್ರವಾದ ಜಿಎನ್ ಇದ್ದಕ್ಕಿದ್ದಂತೆ ಬರಲಿದ್ದು, ಅದರ ಲಕ್ಷಣಗಳು ಹೀಗಿರುತ್ತವೆ. ಮೂತ್ರದಲ್ಲಿ ರಕ್ತ, ಮೂತ್ರ ವಿಸರ್ಜನೆ ಕಡಿಮೆಯಾಗುವುದು, ಉಸಿರಾಟದ ತೊಂದರೆ, ಕೆಮ್ಮು, ತೀವ್ರ ರಕ್ತದೊತ್ತಡ. ದೀರ್ಘಕಾಲದ ಜಿಎನ್ ನಿಧಾನವಾಗಿ ಬೆಳವಣಿಗೆಯಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಜನರು ರೋಗಲಕ್ಷಣಗಳನ್ನು ಅನುಭವಿಸದಿರಬಹುದು.
ಔಷಧಿಗಳ ಬಳಕೆ
ಕೆಲವು ಔಷಧಿಗಳು ಸಹ ಮೂತ್ರದಲ್ಲಿ ರಕ್ತ ಬರಲು ಕಾರಣವಾಗುತ್ತವೆ. ಈ ಔಷಧಿಗಳು ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಸಹಾಯ ಮಾಡುತ್ತದೆ. ಆದರೆ ವಾರ್ಫಾರಿನ್ ಮತ್ತು ಆಸ್ಪಿರಿನ್ ನಂತಹ ಕೆಲವು ವಿಧಗಳು ಮೂತ್ರದಲ್ಲಿ ರಕ್ತವನ್ನು ಉಂಟು ಮಾಡಬಹುದು. ಎನ್ಎಸ್ಎಐಡಿಯನ್ನು ಒಬ್ಬ ವ್ಯಕ್ತಿ ದೀರ್ಘಕಾಲದವರೆಗೆ ಬಳಸಿದರೆ ಮೂತ್ರಪಿಂಡಕ್ಕೆ ಹಾನಿಯಾಬಹುದು. ಸೈಕ್ಲೋಫಾಸ್ಫಮೈಡ್ ಮತ್ತು ಐಫೋಸ್ಫಮೈಡ್ ಇವು ಕೀಮೋಥೆರಪಿ ಔಷಧಿಗಳಾಗಿದ್ದು, ಇದು ಮೂತ್ರದಲ್ಲಿ ರಕ್ತ ಮತ್ತು ಕಿರಿಕಿರಿ ಉಂಟುಮಾಡುತ್ತದೆ. ಸೆನ್ನಾವನ್ನು ದೀರ್ಘಕಾಲದವರೆಗೆ ಬಳಸುವುದರಿಂದಲೂ ಹೆಮಟುರಿಯಾ ಉಂಟಾಗುತ್ತದೆ. ಆದ್ದರಿಂದ ಔಷಧಿ ಬಳಕೆಯಿಂದ ಮೂತ್ರದಲ್ಲಿ ರಕ್ತ ಬಂದರೆ ವೈದ್ಯರೊಂದಿಗೆ ಚರ್ಚಿಸಿ ಗುಣಪಡಿಸಿಕೊಳ್ಳಿ.
ಪ್ರಾಸ್ಟೇಟ್ ಕ್ಯಾನ್ಸರ್
ಯುನೈಟೆಡ್ ಸ್ಟೇಟ್ಸ್ ನಲ್ಲಿ ಸುಮಾರು 10 ಪುರುಷರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ಬಳಲುತ್ತಾರೆ. ರೋಗ ಆರಂಭಿಕ ಹಂತದಲ್ಲಿದ್ದರೆ ಸಾಮಾನ್ಯವಾಗಿ ಗುಣಪಡಿಸಬಹುದು. ಪ್ರಾಸ್ಟೇಟ್ ಕ್ಯಾನ್ಸರ್ ರೋಗಲಕ್ಷಣಗಳು ಬಿಪಿಎಚ್ ನಂತೆಯೇ ಇರುತ್ತದೆ. ಪ್ರಾಸ್ಟೇಟ್ ಕ್ಯಾನ್ಸರ್ ಸಂಭವಿಸಿದಾಗ ಕೆಳಗಿನ ಬೆನ್ನು, ಸೊಂಟ ಅಥವಾ ಮೇಲಿನ ತೊಡೆಯ ನೋವು, ವೀರ್ಯದಲ್ಲಿ ರಕ್ತ, ಹಸಿವು ನಷ್ಟ, ತೂಕ ನಷ್ಟ, ಮೂಳೆ ನೋವು ಕಾಣಿಸಿಕೊಳ್ಳುತ್ತದೆ. ಈ ಯಾವುದೇ ರೋಗಲಕ್ಷಣಗಳನ್ನು ಅನುಭವಿಸಿದಾಗ ಪುರುಷರು ಆದಷ್ಟು ಬೇಗ ವೈದ್ಯರನ್ನು ಭೇಟಿ ಮಾಡಬೇಕು.
ಮೂತ್ರಕೋಶದ ಕ್ಯಾನ್ಸರ್
ಈ ಕ್ಯಾನ್ಸರ್ ನ ಆರಂಭಿಕ ಸೂಚನೆ ಎಂದರೆ ಮೂತ್ರದಲ್ಲಿ ರಕ್ತ. ಕೆಲವು ಜನರಲ್ಲಿ ಮೂತ್ರದ ಬಣ್ಣ ಬದಲಾಗುತ್ತದೆ. ಇತರರಿಗೆ ರಕ್ತದ ಕುರುಹುಗಳು ಮೂತ್ರ ಪರೀಕ್ಷೆಯಲ್ಲಿ ಮಾತ್ರ ಪತ್ತೆಯಾಗುತ್ತವೆ. ಆಗಾಗ್ಗೆ ಮೂತ್ರ ವಿಸರ್ಜಿಸುವುದು, ವಿಶೇಷವಾಗಿ ರಾತ್ರಿಯಲ್ಲಿ ಮೂತ್ರ ವಿಸರ್ಜನೆ ತೊಂದರೆ, ದುರ್ಬಲ ಮೂತ್ರದ ಹರಿವು, ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು ಅಥವಾ ಸುಡುವ ಅನುಭವ, ಒಂದು ಬದಿಯಲ್ಲಿ ಕಡಿಮೆ ಬೆನ್ನು ನೋವು, ಪಾದಗಳಲ್ಲಿ ಉರಿಯೂತ, ಹಸಿವಿನ ನಷ್ಟ, ವಿವರಿಸಲಾಗದ ತೂಕ ನಷ್ಟ, ಮೂಳೆ ನೋವು ಮೂತ್ರಕೋಶದ ಕ್ಯಾನ್ಸರ್ ಗುಣಲಕ್ಷಣಗಳಾಗಿವೆ.