ಸ್ಟಾರ್ ಸ್ಪೋರ್ಟ್ಸ್ ವಿರುದ್ಧ ರೋಹಿತ್ ಶರ್ಮಾ ಅಸಮಾಧಾನ ಹೊರಹಾಕಿದ್ದೇಕೆ!?
ಬೇಡವೆಂದರೂ ವೈಯಕ್ತಿಕ ವಿಚಾರಗಳನ್ನು ರೆಕಾರ್ಡ್ ಮಾಡಿದಲ್ಲದೆ, ಅದನ್ನು ಪ್ರಸಾರ ಮಾಡಿದಕ್ಕಾಗಿ ರೋಹಿತ್, ಐಪಿಎಲ್ ಪ್ರಸಾರದ ಹಕ್ಕು ಖರೀದಿಸಿರುವ ಸ್ಟಾರ್ ಸ್ಪೋರ್ಟ್ಸ್ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಸೀಸನ್ ಆರಂಭಕ್ಕೂ ಮುನ್ನ ನಾಯಕನನ್ನು ಬದಲಿಸಿದ್ದ ಮುಂಬೈ ರೋಹಿತ್ ಶರ್ಮಾ ಬದಲಿಗೆ, ಹಾರ್ದಿಕ್ ಪಾಂಡ್ಯಗೆ ನಾಯಕತ್ವದ ಪಟ್ಟಕಟ್ಟಿತ್ತು. ಆದರೆ ನಾಯಕ ಬದಲಾದರೂ ತಂಡದ ಪ್ರದರ್ಶನ ಮಾತ್ರ ಇನ್ನಷ್ಟು ಶೋಚನಿಯವಾಗಿತ್ತು. ಇದರೊಳಗೆ ನಾಯಕ ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾರನ್ನು ಪಂದ್ಯದ ವೇಳೆ ನಡೆಸಿಕೊಂಡ ರೀತಿ ಎಲ್ಲರನ್ನೂ ಅಸಮಾಧಾನಗೊಳ್ಳುವಂತೆ ಮಾಡಿತ್ತು. ಇದಲ್ಲದೆ ಈ ಸೀಸನ್ ಮುಗಿದ ಬಳಿಕ ರೋಹಿತ್ ಶರ್ಮಾ ಮುಂಬೈ ಪ್ರಾಂಚೈಸಿ ತೊರೆಯಲ್ಲಿದ್ದಾರೆ ಎಂಬ ವದಂತಿ ಹರಡಲು ಶುರುವಾಗಿತ್ತು. ಈ ಬಗ್ಗೆ ರೋಹಿತ್ ಎಲ್ಲಿಯೂ ಮಾತನಾಡಿರಲಿಲ್ಲ. ಆದರೆ ಕೆಕೆಆರ್ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಜೊತೆ ರೋಹಿತ್ ಆಡಿದ ಮಾತುಗಳು ವೈರಲ್ ಆದ ಬಳಿಕ ರೋಹಿತ್ ತಂಡ ತೊರೆಯಲಿದ್ದಾರೆ ಎಂಬುದಕ್ಕೆ ಇನ್ನಷ್ಟು ರೆಕ್ಕೆ ಪುಕ್ಕಗಳು ಸಿಕ್ಕಿದ್ದವು. ಆದರೆ ಇದೀಗ ತಾನು ಬೇಡವೆಂದರೂ ವೈಯಕ್ತಿಕ ವಿಚಾರಗಳನ್ನು ರೆಕಾರ್ಡ್ ಮಾಡಿದಲ್ಲದೆ, ಅದನ್ನು ಪ್ರಸಾರ ಮಾಡಿದಕ್ಕಾಗಿ ರೋಹಿತ್, ಐಪಿಎಲ್ ಪ್ರಸಾರದ ಹಕ್ಕು ಖರೀದಿಸಿರುವ ಸ್ಟಾರ್ ಸ್ಪೋರ್ಟ್ಸ್ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ತನ್ನ ಮನವಿಗೆ ಗೌರವ ನೀಡದೆ, ವಿಡಿಯೋ ಪ್ರಸಾರ ಮಾಡಿದ್ದ ಸ್ಟಾರ್ ಸ್ಪೋರ್ಟ್ಸ್ ವಿರುದ್ಧ ರೋಹಿತ್ ಶರ್ಮಾ ತಮ್ಮ ಸೋಶಿಯಲ್ ಮೀಡಿಯಾ ಖಾತೆ ಎಕ್ಸ್ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಬರೆದುಕೊಂಡಿರುವ ರೋಹಿತ್, ‘ಕ್ರಿಕೆಟಿಗರ ಜೀವನದಲ್ಲಿ ಕ್ಯಾಮೆರಾಗಳು ನುಸುಳಿವೆ, ಅವರ ಪ್ರತಿಯೊಂದು ಹೆಜ್ಜೆಯೂ ದಾಖಲಾಗುತ್ತಿದೆ. ಅದು ತರಬೇತಿ ಸಮಯವಾಗಿರಬಹುದು ಅಥವಾ ಕ್ರಿಕೆಟಿಗರು ತಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗಿನ ಖಾಸಗಿ ಸಂಭಾಷಣೆಯಾಗಿರಬಹುದು. ನನ್ನ ಸಂಭಾಷಣೆಯನ್ನು ರೆಕಾರ್ಡ್ ಮಾಡಬೇಡಿ ಎಂದು ಸ್ಟಾರ್ ಸ್ಪೋರ್ಟ್ಸ್ ಬಳಿ ಮನವಿ ಮಾಡಿದರೂ, ಅವರು ಅದನ್ನು ರೆಕಾರ್ಡ್ ಮಾಡಿ, ಪ್ರಸಾರ ಮಾಡಿದ್ದಾರೆ. ಇದು ಖಾಸಗಿತನದ ಉಲ್ಲಂಘನೆಯಾಗಿದೆ. ವೀಕ್ಷರಿಗೆ ಕುತೂಹಲಕಾರಿ ಸುದ್ದಿಯನ್ನು ನೀಡುವುದಕ್ಕೆ ಹೆಚ್ಚು ಒತ್ತು ನೀಡುವ ಈ ನಡೆಯಿಂದ ಒಂದು ದಿನ ಅಭಿಮಾನಿಗಳು, ಕ್ರಿಕೆಟಿಗರು ಮತ್ತು ಕ್ರಿಕೆಟ್ ನಡುವೆ ಇರುವ ನಂಬಿಕೆ ಮುರಿದುಹೋಗುತ್ತದೆ. ಸ್ವಲ್ಪ ಬುದ್ಧಿವಂತಿಕೆಯಿಂದ ಕೆಲಸ ಮಾಡಿ ಎಂದಿದ್ದಾರೆ.