ಲಕ್ನೋ : ಸಹೋದರ ರಾಹುಲ್ ಗಾಂಧಿ ಸ್ಪರ್ಧಿಸುತ್ತಿರುವ ರಾಯ್ಬರೇಲಿ ಮತ್ತು ಕುಟುಂಬದ ಆಪ್ತ ಕಿಶೋರಿ ಲಾಲ್ ಶರ್ಮಾ ಸ್ಪರ್ಧಿಸುತ್ತಿರುವ ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಸತತ ಪ್ರಚಾರ ನಡೆಸುತ್ತಿರುವ ಪ್ರಿಯಾಂಕ ಗಾಂಧಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಗಂಭೀರ ಪ್ರಶ್ನೆಯನ್ನು ಕೇಳಿದ್ದಾರೆ. ’ ಬಿಜೆಪಿಯವರ ಚುನಾವಣೆಯ ವೇಳೆ ಮಾತ್ರ ನಮ್ಮ ಕುಟುಂಬದವರು ಅಮೇಠಿ ಮತ್ತು ರಾಯ್ಬರೇಲಿ ಕ್ಷೇತ್ರಕ್ಕೆ ಆಗಮಿಸುತ್ತಾರೆ ಎನ್ನುವ ಆರೋಪವು ನಿರಾಧಾರ.
ಸ್ಮೃತಿ ಇರಾನಿಗೆ ಹಲವು ವರ್ಷ ಇಲ್ಲಿನ ಜನರ ಜೊತೆಗೆ ಒಡನಾಟ ಮಾಡಲು ಸಮಯ ಬೇಕಾಯಿತು, ನಮಗೆ ಹಾಗಲ್ಲ ’ ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಎಲ್ಲಾ ಮಾಹಿತಿ ಇರುತ್ತದೆ ಅಲ್ವಾ, ಅದರಲ್ಲೂ ಮಹಿಳೆಯರ ಬಗ್ಗೆ ವಿಶೇಷ ಗಮನವನ್ನು ಇಟ್ಟುಕೊಂಡಿರುತ್ತಾರೆ. ಯಾರು ಯಾರನ್ನು ಭೇಟಿಯಾಗುತ್ತಾರೆ ಎನ್ನುವ ಮಾಹಿತಿ ಅವರ ಬಳಿ ಇರುತ್ತದೆ. ನನ್ನ ವೈಯಕ್ತಿಕ ಪ್ರವಾಸದ ಮಾಹಿತಿಯೂ ಅವರಿಗಿದೆ ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ.
https://ainlivenews.com/israels-farming-model-alleviating-the-suffering-of-our-farmers/
’ ಕೆಲವು ದಿನಗಳ ಹಿಂದೆ ನನ್ನ ಮಗಳನ್ನು ಭೇಟಿಯಾಗಲು ನಾನು ಥೈಲ್ಯಾಂಡ್ ದೇಶಕ್ಕೆ ಹೋಗಿದ್ದೆ, ಇದನ್ನು ಅಮಿತ್ ಶಾ ತಮ್ಮ ಚುನಾವಣಾ ಪ್ರಚಾರದಲ್ಲಿ ಹೇಳಿದ್ದರು. ನಾನು ಅಲ್ಲಿಗೆ ಹೋಗಿದ್ದು ನಿಜ, ಆದರೆ, ಈ ಮಾಹಿತಿ ಅಮಿತ್ ಶಾ ಅವರಿಗೆ ಹೇಗೆ ಲಭ್ಯವಾಗುತ್ತದೆ ಎನ್ನುವುದು ಮುಖ್ಯ ’ ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ. ನಮಗೆಲ್ಲಾ ಮಾಹಿತಿ ಸಿಗುತ್ತದೆ ಎಂದು ಅಮಿತ್ ಶಾ ಹೇಳುತ್ತಾರೆ, ಹಾಗಾದರೆ ಅವರು ಸುಳ್ಳು ಯಾಕೆ ನುಡಿಯುತ್ತಾರೆ? ನಾವು ಚುನಾವಣೆಯ ವೇಳೆ ಮಾತ್ರ ಕ್ಷೇತ್ರಕ್ಕೆ ಆಗಮಿಸುವ ನಾಯಕರಲ್ಲ. ಬಿಜೆಪಿ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಪ್ರಿಯಾಂಕ ತಿರುಗೇಟು ನೀಡಿದ್ದಾರೆ.