ವಾಹನಗಳಿಗೆ ಹಳೆಯ ನಂಬರ್ ಪ್ಲೇಟ್ ಬದಲು ಹೈಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಹೆಚ್ಎಸ್ಆರ್ಪಿ) ಅಳವಡಿಕೆಗೆ ಮೇ 31 ಕಡೆಯ ದಿನವಾಗಿದ್ದು,ತಪ್ಪಿದ್ದಲ್ಲ ದಂಡ ವಿಧಿಸಲಾಗುವುದು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಬಗ್ಗೆ ಈ ಹಿಂದೆ ಸಾರಿಗೆ ಇಲಾಖೆ ನೀಡಿದ್ದ ಗಡುವು ವಿಸ್ತರಣೆ ಮಾಡುವಂತೆ ವಾಹನಗಳ ಮಾಲೀಕರು ಒತ್ತಾಯಿಸಿದ್ದರು. ಕೆಲ ಹಳೆಯ ವಾಹನಗಳ ಕಂಪನಿಯ ಶೋರೂಮ್ಗಳ ಅಲಭ್ಯತೆ, ವೆಬ್ ಪೋರ್ಟಲ್ನ ಸರ್ವರ್ ಸಮಸ್ಯೆ ಹಾಗೂ ಪ್ರೀ ಬುಕ್ಕಿಂಗ್ ಸ್ಲಾಟ್ಗಳು ನಿಗದಿ ಆಗಿರುವುದರಿಂದ ನಿಗದಿತ ಸಮಯದಲ್ಲಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವಾಹನ ಸವಾರರು ತಮ್ಮ ಅಳಲು ತೋಡಿಕೊಂಡಿದ್ದರು. ಇದರಿಂದ ಹೆಚ್ಎಸ್ಆರ್ಪಿ ಅಳವಡಿಕೆಗೆ ಮೇ 31ರವರೆಗೂ ಗಡುವು ನೀಡಲಾಗಿತ್ತು.
ಅವಧಿ ವಿಸ್ತರಣೆಯ ಬಳಿಕವೂ ಸಾಕಷ್ಟು ವಾಹನಗಳ ಮಾಲೀಕರು ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುತ್ತಿಲ್ಲ. ಆದ್ದರಿಂದ ಮೇ 31ರ ನಂತರವೂ ಹೆಚ್ಎಸ್ಆರ್ಪಿ ಪ್ಲೇಟ್ ಅಳವಡಿಸದ ವಾಹನಗಳಿಗೆ ದಂಡ ವಿಧಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಮೊದಲ ಬಾರಿ ನಿಯಮ ಉಲ್ಲಂಘಿಸಿದವರಿಗೆ 500 ರೂ. ದಂಡ ವಿಧಿಸಲಾಗುತ್ತದೆ. ಆನಂತರದಲ್ಲಿ ಪ್ರತಿ ಬಾರಿಯೂ 1,000 ರೂ. ದಂಡ ವಿಧಿಸಲು ಚಿಂತಿಸಲಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಖರೀದಿಸಿದ/ನೊಂದಾಯಿಸಲ್ಪಟ್ಟ ವಾಹನಗಳು ಕಡ್ಡಾಯವಾಗಿ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸುವಂತೆ ಸೂಚಿಸಲಾಗಿದೆ. ರಾಜ್ಯದಲ್ಲೇ 2019ರ ಏಪ್ರಿಲ್ 1ಕ್ಕೂ ಮುನ್ನ ನೋಂದಣಿಯಾಗಿರುವ ವಾಹನಗಳ ಸಂಖ್ಯೆ ಸುಮಾರು 2 ಕೋಟಿಯಷ್ಟಿದ್ದು, ಹಳೆಯ ನಂಬರ್ ಪ್ಲೇಟ್ ಬದಲಾವಣೆಗೆ ಮೊದಲಿಗೆ 2023ರ ನವೆಂಬರ್ 17ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಸಾಕಷ್ಟು ವಾಹನಗಳ ಮಾಲೀಕರಿಗೆ ಮಾಹಿತಿಯ ಕೊರತೆ ಹಾಗೂ ಗೊಂದಲದ ಕಾರಣದಿಂದ ಸರಿಯಾದ ಸ್ಪಂದನೆ ವ್ಯಕ್ತವಾಗಿರಲಿಲ್ಲ. ಆದ್ದರಿಂದ 2024ರ ಫೆಬ್ರವರಿ 17ರವರೆಗೆ ಗಡುವು ವಿಸ್ತರಿಸಲಾಗಿತ್ತು. ನಂತರವೂ ಸಹ ಮೂರನೇ ಬಾರಿಗೆ ಮೇ 31ರ ವರೆಗೂ ಗಡುವು ವಿಸ್ತರಿಸಲಾಗಿದೆ.