ಕೆ.ಆರ್.ಪುರ, ಮೇ.14– ಬೆಂಗಳೂರು ನಗರದಲ್ಲಿ ನೀರಿನ ಬವಣೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನೀರಿನ ಉಳಿವು ಹಾಗೂ ಮಿತ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಶಾಂತಕೃಷ್ಣಮೂರ್ತಿ ಫೌಂಡೇಶನ್ ವತಿಯಿಂದ ಕ್ಷೇತ್ರದ ರಾಮಮೂರ್ತಿನಗರದಲ್ಲಿ ಜಾಗೃತಿಗಾಗಿ ಇದೇ 18 ರಂದು ವಾಕಥಾನ್ ಏರ್ಪಡಿಸಲಾಗಿದೆ.
ಫೌಂಡೇಶನ್ ಅಧ್ಯಕ್ಷೆ ಶಾಂತ ಕೃಷ್ಣಮೂರ್ತಿ ಅವರು ಮಾತನಾಡಿ ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ವ್ಯಯವಾಗುತ್ತಿರುವ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಐದು ಕಿಲೋಮೀಟರ್ ವಾಕಥಾನ್ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ವಾಕಥಾನ್ ಗೆ ಶಾಸಕ ಬಿ.ಎ.ಬಸವರಾಜ ಅವರು, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್,ಹಾಗೂ ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಚಾಲನೆ ನೀಡಲಿದ್ದು ನೂರಾರು ಮಂದಿ ನಾಗರೀಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಮಳೆ ನೀರು ಕೊಯ್ಲು ,ಇಂಗುಗುಂಡಿಗಳ ಹೆಚ್ಚಳ ಸೇರಿದಂತೆ ಅಂತರ್ಜಲ ವೃದ್ಧಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಈ ವಾಕಥಾನ್ ನಲ್ಲಿ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.
ನಂತರ ಮಾತನಾಡಿದ ಶಾಂತ ಕೃಷಮೂರ್ತಿ ಫೌಂಡೇಶನ್ ಸಂಸ್ಥಾಪಕರು ಕೃಷಮೂರ್ತಿ ಮಾತನಾಡಿ
ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಕೊಳವೆ ಬಾವಿಗಳಲ್ಲಿ ನೀರು ಲಭ್ಯವಾಗುತ್ತಿಲ್ಲ. ಅಂತರ್ಜಲ ಮರುಬಳಕೆಗೆ ಅಗತ್ಯವಿರುವ ಕ್ರಮಗಳನ್ನು ಜನರು ತೆಗೆದುಕೊಳ್ಳಬೇಕು. ನೀರನ್ನು ಮಿತವಾಗಿ ಬಳಸುವುದರೊಂದಿಗೆ ಅದರ ಸಂಕ್ಷರಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.ಕಳೆದ ಎಂಟು ವರ್ಷಗಳಿಂದ ರಾಮಮೂರ್ತಿನಗರ ಭಾಗಕ್ಕೆ ನಮ್ಮ ಶಾಂತಕೃಷ್ಣಮೂರ್ತಿ ಫೌಂಡೇಶನ್ ವತಿಯಿಂದ ಉಚಿತ ಕುಡಿಯುವ ನೀರನ್ನ ಒದಗಿಸುತ್ತಾ ಬಂದಿದ್ದೇವೆ.
ಪ್ರತಿ ವರ್ಷ ಬೇಸಿಗೆಯಲ್ಲಿ ಈ ಭಾಗದಲ್ಲಿ ನೀರಿನ ಬವಣೆ ಹೆಚ್ಚಾಗುತ್ತಲೇ ಇರುತ್ತದೆ.ಈ ಸಮಸ್ಯೆಗಳನ್ನು ಬಗೆಹರಿಸಲು ನಾಗರಿಕರಿಗೆ ನೀರಿನ ಮಿತ ಬಳಕೆಯ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದರು.
ಮುಂಬರುವ ಶನಿವಾರದಂದು ಜೂಬ್ಲಿ ಕಾಲೇಜು ಆವರಣದಲ್ಲಿ ನೀರಿನ ಮಿತ ಬಳಕೆ ಮಾಡುವ ಬಗ್ಗೆ ನುರಿತ ತಜ್ಞರು ಸಲಹೆ ಸೂಚನೆಗಳನ್ನು ನೀಡಲು ಬರುತ್ತಿದ್ದಾರೆ ಈ ಭಾಗದ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಫೌಂಡೇಶನ್ ಸಂಸ್ಥಾಪಕ ಸದಸ್ಯ ಕೃಷ್ಣಮೂರ್ತಿ, ಮುಖಂಡರಾದ ಆನಂದ್,ಪೃಥ್ವಿ, ಸುಬ್ರಹ್ಮಣಿ,ಮೈಕಲ್,ಸತೀಶ್,ಹಿರೇಗೌಡ ಇದ್ದರು.