ಸತತ 5 ಗೆಲುವಿನ ಹಿಂದಿರುವ ಗುಟ್ಟನ್ನು ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಬಿಚ್ಚಿಟ್ಟಿದ್ದಾರೆ.
ನಿತ್ಯ ಮೊಸರು ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ..!? ಈ ರೋಗಗಳನ್ನು ತಡೆಯಬಹುದು!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸತತ 5 ಗೆಲುವು ದಾಖಲಿಸುವ ಮೂಲಕ ಪ್ಲೇ-ಆಫ್ಸ್ ಆಸೆಯನ್ನು ಜೀವಂತವಾಗಿ ಉಳಿಸಿಕೊಂಡಿದೆ. ತವರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 47 ರನ್ಗಳಿಂದ ಗೆದ್ದ ಆರ್ಸಿಬಿ, ಈಗ ಅಂಕಪಟ್ಟಿಯಲ್ಲಿ ಒಟ್ಟು 12 ಅಂಕಗಳನ್ನು ಕಲೆಹಾಕಿದೆ.
ಆರ್ಸಿಬಿ ತಂಡದ ಈ ಭರ್ಜರಿ ಕಮ್ಬ್ಯಾಕ್ ಬಗ್ಗೆ ಮಾತನಾಡಿರುವ ನಾಯಕ ಫಾಪ್ ಡು ಪ್ಲೆಸಿಸ್, ಕಠಿಣ ಪರಿಶ್ರಮದ ಮೂಲಕ ತಂಡ ಈ ಆತ್ಮವಿಶ್ವಾಸ ಕಂಡುಕೊಂಡಿದೆ ಎಂದ ಹೇಳಿದ್ದಾರೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 187/9 ರನ್ಗಳ ಸವಾಲಿನ ಮೊತ್ತ ದಾಖಲಿಸಿತು. ಬಳಿಕ ರನ್ ಚೇಸ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 140 ರನ್ಗಳಿಗೆ ಆಲ್ಔಟ್ ಮಾಡಿ ಪ್ಲೇ-ಆಫ್ಸ್ ರೇಸ್ನಲ್ಲಿ ಮುನ್ನುಗ್ಗಿದೆ.
“ಇದು ಅದ್ಭುತ ಗೆಲುವು. ಈ ಸಲುವಾಗಿ ನಾವು ಅಮೋಘ ಆಟವಾಡಬೇಕಿತ್ತು. ಇದು ಕೇವಲ ಆತ್ಮವಿಶ್ವಾಸವಷ್ಟೆ. ಟೂರ್ನಿಯ ಮೊದಲಾರ್ಧದಲ್ಲಿ ನಾವು ಹೋರಾಡುತ್ತಿದ್ದೆವು. ಮೊದಲ 5-6 ಪಂದ್ಯಗಳಲ್ಲಿ ನಮ್ಮಿಂದ ಹೆಚ್ಚು ವಿಕೆಟ್ಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಈಗ ಮೂರಕ್ಕೂ ಹೆಚ್ಚು ಬಾರಿ ಎದುರಾಳಿ ತಂಡಗಳನ್ನು ಆಲ್ಔಟ್ ಮಾಡಿದ್ದೇವೆ,” ಎಂದು ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಫಾಫ್ ಡು ಪ್ಲೆಸಿಸ್ ಆರ್ಸಿಬಿ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ
ನಮ್ಮ ಬೌಲಿಂಗ್ ವಿಭಾಗದಲ್ಲಿ ಈಗ ವೈವಿದ್ಯತೆ ಸಿಕ್ಕಿರುವುದು ಒಬ್ಬ ಕ್ಯಾಪ್ಟನ್ ಆಗಿ ಉತ್ತಮ ಅನುಭವ ತಂದುಕೊಟ್ಟಿದೆ. ಈಗ ತಂಡದಲ್ಲಿ 6-7 ಬೌಲರ್ಗಳು ಲಭ್ಯರಿದ್ದಾರೆ. ಪರಿಸ್ಥಿತಿಗೆ ತಕ್ಕಂತೆ ಬೌಲರ್ಗಳನ್ನು ಬಳಸಿಕೊಳ್ಳುತ್ತಿದ್ದೇವೆ. ಯಶ್ ದಯಾಳ್ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ಲಾಕಿ ಫರ್ಗ್ಯೂಸನ್ ಕೂಡ ಯಶಸ್ಸು ತಂದಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳ ಪ್ರದರ್ಶನ ಈಗ ಉತ್ತಮವಾಗಿದೆ. ನಮ್ಮ ಮೂಲ ಮಂತ್ರದಂತೆ ದಿಟ್ಟ ಆಟ (ಪ್ಲೇ ಬೋಲ್ಡ್) ಆಡುವುದಷ್ಟೇ ನಮ್ಮ ಗುರಿ,” ಎಂದಿದ್ದಾರೆ.
ನಾಕ್ಔಟ್ ಮಹತ್ವ ಪಡೆದಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಹೈ ವೋಲ್ಟೇಜ್ ಹಣಾಹಣಿಗೂ ಮುನ್ನ ಆರ್ಸಿಬಿ ತಂಡಕ್ಕೆ ಬರೋಬ್ಬರಿ 5 ದಿನಗಳ ವಿಶ್ರಾಂತಿ ಲಭ್ಯವಾಗಿದೆ.