ವಿಜಯಪುರ: ಪ್ರಜ್ವಲ್ ಮೇಲೆ ಕ್ರಮ ಕೈಗೊಳ್ಳಲೇಬೇಕು ಎಂದು ಜೆಡಿಎಸ್ ಪಕ್ಷಕ್ಕೆ ಬಿಜೆಪಿಯಿಂದ ವಿನಂತಿ ಮಾಡಿಕೊಂಡಿದ್ದೇವೆ.ಕಾನೂನು ಕ್ರಮಕ್ಕೆ ಕೂಡಾ ಒತ್ತಾಯ ಮಾಡಲಾಗಿದೆ ಎಂದು ಬಿಜೆಪಿ ಮಾಜಿ ಸಚಿವ ಅರವಿಂದ್ ಲಿಂಬಾವಳಿ ಹೇಳಿದರು. ವಿಜಯಪುರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭಿವೃದ್ಧಿ ಆಧಾರದ ಮೇಲೆ ಮತ ಯಾಚನೆ ನಡೆಸಿದೆ. ಕಳೆದ ಹತ್ತು ವರ್ಷಗಳ ಕಾಲ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಕೈಗೊಂಡ ಅಭಿವೃದ್ಧಿ, ಸುರಕ್ಷತೆ ಆಧಾರದ ಮೇಲೆ ಪ್ರಚಾರ ಕಾರ್ಯ ಕೈಗೊಳ್ಳಲಾಗಿದೆ. ಹೀಗಾಗಿ ಜನ ಅಭಿವೃದ್ಧಿಗಾಗಿ ಮತ್ತೆ ಬಿಜೆಪಿಯನ್ನು ಬೆಂಬಲಿಸಲು ಉತ್ಸುಕರಾಗಿದ್ದಾರೆ ಎಂದರು.
ಸಾಮಾನ್ಯವಾಗಿ ಪ್ರತಿಪಕ್ಷಗಳು ಆಡಳಿತ ವಿರೋಧಿ ಅಲೆ ಬಳಸಿಕೊಂಡು ಮತಯಾಚನೆ ಮಾಡುವುದು ವಾಡಿಕೆ. ಆದರೆ ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ಮೋದಿಯವರ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಮೋದಿ ಬಗ್ಗೆ ಟೀಕೆ ಮಾಡಲು ಯಾವುದೇ ಅವಕಾಶ ಇಲ್ಲದ ಕಾರಣ ಪ್ರತಿಪಕ್ಷಗಳು ಸುಳ್ಳು ಆರೋಪದಲ್ಲಿ ತೊಡಗಿಸಿಕೊಂಡಿವೆ. ಅದರ ಭಾಗವಾಗಿ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಕಾಂಗ್ರೆಸ್ ರಾಜಕೀಕರಣಗೊಳಿಸುತ್ತಿದೆ.
ಕಾಂಗ್ರೆಸ್ ಸರ್ಕಾರವೇ ಎಸ್ಐಟಿ ರಚನೆ ಮಾಡಿದೆ. ತನಿಖೆ ಆಗಲಿದೆ. ಕಾನೂನು ಏನು ಕ್ರಮ ಕೈಗೊಳ್ಳುತ್ತದೆ ಕಾದು ನೋಡಬೇಕು ಎಂದರು.ನಾವು ಕೂಡ ಈ ಪ್ರಕರಣವನ್ನು ಖಂಡಿಸುತ್ತೇವೆ, ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದರು. ಇದೇ ವೇಳೆ ಕಲಬುರಗಿ ನೇಹಾ ಹಿರೇಮಠ ಹತ್ಯೆ ಪ್ರಕರಣ ಸಂಬಂಧ ಮಾತನಾಡಿದ ಅವರು, ನೇಹಾ ಪ್ರಕರಣ ಕೇವಲ ಒಂದು ಕೊಲೆ ಮಾತ್ರವಲ್ಲ, ಅದಕ್ಕೂ ಇದಕ್ಕೂ ಹೋಲಿಕೆ ಮಾಡುವುದು ಸರಿಯಲ್ಲ ಎಂದರು.