ದಾವಣಗೆರೆ:- ಇಲ್ಲಿನ ಲೋಕಸಭಾ ಕ್ಷೇತ್ರಕ್ಕೆ 33 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ದವಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಏ.19 ಕೊನೆಯ ದಿನವಾಗಿತ್ತು, ಒಟ್ಟು 40 ಅಭ್ಯರ್ಥಿಗಳಿಂದ 54 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಏ.20 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ನಾಮಪತ್ರಗಳ ಪರಿಶೀಲನೆಯು ಚುನಾವಣಾ ವೀಕ್ಷಕರಾದ ಎಂ.ಲಶ್ಮಿ ಹಾಗೂ ಅಭ್ಯರ್ಥಿಗಳ ಸಮ್ಮುಖದಲ್ಲಿ ನಡೆಯಿತು.
ಒಟ್ಟು ಸಲ್ಲಿಕೆಯಾದ 54 ನಾಮಪತ್ರಗಳಲ್ಲಿ 42 ನಾಮಪತ್ರಗಳು ಕ್ರಮಬದ್ದವಾಗಿದ್ದು 12 ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ. ನಾಮಪತ್ರ ಸಲ್ಲಿಸಿದ 40 ಅಭ್ಯರ್ಥಿಗಳಲ್ಲಿ 7 ಅಭ್ಯರ್ಥಿಗಳ ನಾಮಪತ್ರ ಸಂಪೂರ್ಣವಾಗಿ ತಿರಸ್ಕೃತವಾಗಿವೆ.
ನಾಮಪತ್ರ ಸಂಪೂರ್ಣ ತಿರಸ್ಕೃತರಾದವರ ವಿವರ. ರಾಘವೇಂದ್ರ ಜಿ.ಪಿ ಕೆ.ಆರ್.ಎಸ್ ಪಕ್ಷ, ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸುಭಾನ್ ಖಾನ್, ಸಿ.ಎಂ.ಮಂಜುನಾಥಸ್ವಾಮಿ, ಎಂ.ರಂಗನಾಥಸ್ವಾಮಿ, ಪ್ರಸನ್ನ ಬಿ.ಆರ್, ಕರನಂ ಕೊಟ್ರಪ್ಪ ಮತ್ತು ಬಿಜೆಪಿಯಿಂದ ಪರ್ಯಾಯ ಅಭ್ಯರ್ಥಿಯಾಗಿ ಸಲ್ಲಿಸಿದ್ದ ಜಿ.ಎಂ.ಸಿದ್ದೇಶ್ವರ ಇವರ ಸಂಪೂರ್ಣ ಉಮ್ಮೇದುವಾರಿಕೆ ತಿರಸ್ಕರಿಸಲಾಗಿದೆ.