ಹಾವೇರಿ: ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಬ್ಯರ್ಥಿ ಬಸವರಾಜ ಬೊಮ್ಮಾಯಿಯವರು ಇಂದು ಹಾವೇರಿಯಲ್ಲಿ ನಾಮಪತ್ರ ಸಲ್ಲಿಕೆಗೆ ಸಾವಿರಾರು ಜನರನ್ನು ಸೇರಿಸುವ ಮೂಲಕ ಬೃಹತ್ ಶಕ್ತಿ ಪ್ರದರ್ಶನ ಮಾಡಿದರು. ಶುಕ್ರವಾರ ಯಾಲಕ್ಕಿ ನಗರ ಸಂಪೂರ್ಣ ಕೇಸರಿಮಯವಾಗಿ ಪರಿಣಮಿಸಿತ್ತು.
ನೇಹಾ ಹಿರೇಮಠ ಹತ್ಯೆ ಪ್ರಕರಣ ಎಸ್ ಐಟಿಯಿಂದ ತನಿಖೆ ನಡೆಸಲಿ: ಬಸವರಾಜ ಬೊಮ್ಮಾಯಿ
ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ನಗರದಲ್ಲಿ ನಡೆದ ಬೃಹತ್ ರೋಡ್ ಶೋ ನಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ನಗರದ ಹುಕ್ಕೇರಿ ಮಠದಿಂದ ಆರಂಭವಾದ ರೋಡ್ ಶೋ ಸಿದ್ದಪ್ಪ ಕಂಬಳಿ ಸರ್ಕಲ್ ವರೆಗೂ ನಡೆಯಿತು. ಮೆರವಣಿಗೆಯ ನಂತರ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಬಸವರಾಜ ಬೊಮ್ಮಾಯಿಯವರು, ಬಹಳ ದೊಡ್ಡ ಸಂಖ್ಯೆಯಲ್ಲಿ ಸಾಗರೋಪಾದಿಯಲ್ಲಿ ಜನಸಾಗರ ಹರಿದು ಬಂದಿದ್ದು ಕೋಟಿ ಕೋಟಿ ನಮನಗಳನ್ನು ಸಲ್ಲಿಸಲು ಬಯಸುತ್ತೇನೆ. ಇದು ಲೋಕಸಭಾ ಚುನಾವಣೆಯ ವಿಜಯದ ಸಂಕೇತ ಎಂದು ಹೇಳಿದರು.
ಇವತ್ತಿನ ಕಾರ್ಯಕ್ರಮಕ್ಕೆ ಆಗಮಿಸಿರುವ ಹಾವೇರಿ ಜಿಲ್ಲೆಯ ಹಾನಗಲ್ ಬ್ಯಾಡಗಿ, ಹಿರೆಕೆರೂರು, ರಾಣೆಬೆನ್ನೂರು, ಹಾವೇರಿ, ಗದಗ. ಜಿಲ್ಲೆಯ ಶಿರಹಟ್ಟಿ, ರೋಣ, ಗದಗ ತಾಲೂಕಿನ ಎಲ್ಲ ಜನರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಮೋದಿಯವರು ಮತ್ತೆ ಪ್ರಧಾನಿ ಆಗಲೇಬೇಕು. ಬಿಜೆಪಿ ಕೇಂದ್ರದಲ್ಲಿ ಈ ಸಾರಿ 400 ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದ್ದು ರಾಜ್ಯದಲ್ಲಿ 28 ಸ್ಥಾನ ಗೆಲ್ಕುವುದು ಖಚಿತ ಎಂದರು.
ಹಾವೇರಿ ಜಿಲ್ಲೆಯಲ್ಲಿ ಶಿಕ್ಷಣ, ಉದ್ಯೋಗ, ನೀರಾವರಿ ಯೋಜನೆಗಳನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಈಗಾಗಲೇ ತುಂಗಾ ಮೇಲ್ದಂಡೆ ಯೋಜನೆ ಅಡಿಯಲ್ಲಿ 1 ಲಕ್ಷ ಎಕರೆ ಜಮೀನು ನೀರಾವರಿ ಮಾಡಿದ್ದು, ಸಿಂಗಟಾಲೂರು ಯೋಜನೆಯನ್ನು ಪೂರ್ಣಗೊಳಿಸುತ್ತೇನೆ ಎಂದರು.
ಮೀಸಲಾತಿ ಹೆಚ್ಚಳ
ನಾನು ಮುಖ್ಯಮಂತ್ರಿಯಾಗಿದ್ದಾಗ ಎಸ್ಸಿ ಎಸ್ಟಿ ಸಮುದಾಯದ ಮೀಸಲಾತಿಯನ್ನು ಹೆಚ್ಚಳ ಮಾಡುವ ಭಾಗ್ಯ ನನ್ನದಾಗಿತ್ತು ಎಸ್ಸಿಗೆ ಮೀಸಲಾತಿ ಪ್ರಮಾಣವನ್ನು ಶೇ 15 ರಿಂದ ಶೇ 17 ಕ್ಕೆ ಎಸ್ಟಿ ಮೀಸಲಾತಿ ಪ್ರಮಾಣವನ್ನು ಶೇ. 3 ರಿಂದ 7 ಕ್ಕೆ ಹೆಚ್ಚಳ ಮಾಡಲಾಗಿದೆ. ಒಬಿಸಿಯಲ್ಲಿ 2ಡಿ ಗೆ ಅವಕಾಶ ಕಲ್ಪಿಸಿದ್ದು ಮೀಸಲಾತಿ ಪ್ರಮಾಣವನ್ನು ಶೇ 9 ಕ್ಕೆ ಹೆಚ್ಚಳ ಮಾಡಲಾಗಿದೆ. ಅದು ಕೇಂದ್ರ ಸರ್ಕಾರದಲ್ಲಿದ್ದು ಎಲ್ಲರೂ ಒಟ್ಟಾಗಿ ಸೇರಿ ಅದನ್ನು ಜಾರಿ ಮಾಡಿಸುವ ಕೆಲಸ ಮಾಡುತ್ತೇವೆ ಎಂದರು.
ದರಿದ್ರ ಸರ್ಕಾರ
ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಹಾಡ ಹಗಲೇ ಕೊಲೆ ದರೋಡೆ ನಡೆಯುತ್ತಿದೆ. ಈ ದರಿದ್ರ ಸರ್ಕಾರದ ಅವಧಿಯಲ್ಲಿ ವಿದ್ಯಾರ್ಥಿಗಳು, ಮನೆ ಮಂದಿಯ ಕೊಲೆಯಾಗುತ್ತಿದೆ. ಕರ್ನಾಟಕ ಜಂಗಲ್ ರಾಜ್ಯ ಆಗುತ್ತಿದೆ. ಈ ದರಿದ್ರ ಸರ್ಕಾರವನ್ನು ಕಿತ್ತು ಒಗೆಯಬೇಕು ಎಂದು ಹೇಳಿದರು.
ದೇಶಕ್ಕೆ ಮೋದಿ ಹಾವೇರಿ ಗದಗಿಗೆ ಬೊಮ್ಮಾಯಿ
ನಗರದ ಹುಕ್ಕೇರಿ ಮಠದಿಂದ ಆರಂಭವಾದ ಮೆರವಣಿಗೆ ಗಾಂಧಿ ಬಜಾರ ಮೂಲಕ ಹೆಡ್ ಪೋಸ್ಟ್ ಆಫೀಸ್ ಮಾರ್ಗವಾಗಿ ಗುದ್ಲೆಪ್ಪ ಹಳ್ಳಿಕೇರಿ ಸರ್ಕಲ್ ವರೆಗೂ ಸುಮಾರು ಸುಮಾರು ಎರಡು ಗಂಟೆಗಳ ಕಾಲ ಬೃಹತ್ ರೋಡ್ ಶೋ ನಡೆಯಿತು.
ಮೆರವಣಿಗೆಯಲ್ಲಿ ಡೊಳ್ಳು, ಜಾಂಜು, ಮಹಿಳಾ ಡೊಳ್ಳು ವಿವಿಧ ವೇಷದ ಮಾನವ ಗೊಂಬೆಗಳು ಆಕರ್ಷಣೀಯವಾಗಿದ್ದವು.
ಮೇಳೈಸಿದ ಮೈತ್ರಿಧ್ವಜಗಳು
ಲೋಕಸಭೆ ಚುನಾವಣೆಗೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿರುವುದರಿಂದ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಎರಡೂ ಪಕ್ಷಗಳ ಧ್ವಜಗಳನ್ನು ಹಿಡಿದು ಕಾರ್ಯಕರ್ತರು ಒಟ್ಟಾಗಿ ನಡೆದುಕೊಂಡು ಹೋಗಿದ್ದು ಎದ್ದು ಕಾಣಿಸುತ್ತಿತ್ತು.
ರಾಜ್ಯ ನಾಯಕರ ಸಾಥ್
ಬಸವರಾಜ ಬೊಮ್ಮಾಯಿಯವರ ನಾಮಪತ್ರ ಸಲ್ಲಿಕೆಯ ರೋಡ್ ಶೋಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ, ಸಂಸದ ಶಿವಕುಮಾರ್ ಉದಾಸಿ, ಮಾಜಿ ಸಚಿವರಾದ ಸಿ.ಸಿ. ಪಾಟೀಲ್, ಬಿ.ಸಿ.ಪಾಟೀಲ್, ಮಾಜಿ ಶಾಸಕರಾದ ಅರುಣ್ ಕುಮಾರ್ ಪೂಜಾರ್, ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ್ ಸಜ್ಜನ್, ಚಿತ್ರನಟಿ ತಾರಾ, ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಪಾಲ್ಗೊಂಡಿದ್ದರು.