ಹಾವೇರಿ : ರಾಜಕಾರಣದಲ್ಲಿ ರೌಡಿಸಂ ಮಾಡುವುದನ್ನು ಕನ್ನಡಿಗರು ಸಹಿಸುವುದಿಲ್ಲ. ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರಿಗೆ ಸಲಹೆ ಕೊಡುವಷ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ದೊಡ್ಡವರಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,
ತುಮಕೂರಿನಲ್ಲಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು ನಡೆಸುತ್ತಿರುವ ಸಭೆಗೆ ನುಗ್ಗಿ ದಾಂಧಲೆ ನಡೆಸಿರುವುದು ಖಂಡನೀಯ. ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ವ್ಯಕ್ತ ಮಾಡಲು ನಮಗೆ ಅವಕಾಶ ಇದೆ. ಅದನ್ನು ಬಿಟ್ಟು ಮಾಜಿ ಪ್ರಧಾನಿ ಕನ್ನಡಿಗರ ಹೆಮ್ಮೆಯ ದೇವೇಗೌಡರ ಸಭೆಯಲ್ಲಿ ಆ ರೀತಿ ದಾಂಧಲೆ ಮಾಡುವುದು ನಮ್ಮ ಸಂಸ್ಕೃತಿ ಅಲ್ಲ. ಜನರು ಎಲ್ಲವನ್ನೂ ನೋಡುತ್ತಾರೆ. ವಿಶೇಷವಾಗಿ ದೇವೇಗೌಡರು ಕನ್ನಡದ ಸಲುವಾಗಿ ಕನ್ನಡಿಗರಿಗಾಗಿ ಪಕ್ಷ ಬೇಧ ಮರೆತು ಹೋರಾಟ ಮಾಡಿದ್ದಾರೆ ಎಂದು ಹೇಳಿದರು.