ಗದಗ: ಕಾಂಗ್ರೆಸ್ ಗೆ ಹಾಕುವ ಮತ ಸೋಲುವುದು ಗ್ಯಾರಂಟಿ ಎಂದು ಮಾಜಿ ಸಿಎಂ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದರು. ಇದೊಂದು ಮಹತ್ವದ ಚುನಾವಣೆ. ಈ ದೇಶದ ಚುಕ್ಕಾಣಿ ಯಾರು ಹಿಡಿಯಬೇಕು ಎನ್ನುವುದು ಮುಖ್ಯ. ಪ್ರತಿಯೊಬ್ಬ ಮತದಾರನಿಗೂ ತನ್ನ ಮತ ಗೆಲ್ಲಬೇಕೆಂಬ ಆಸೆ ಇರುತ್ತದೆ. ಯಾರು ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ ಅವರಿಗೆ ಮತ ಹಾಕಿದರೆ ಮತ ಗೆಲ್ಲುತ್ತದೆ ಎನ್ನುವುದು ಜನರ ಭಾವನೆ. ಈ ಚುನಾವಣೆಯಲ್ಲಿ ಬಿಜೆಪಿ 370 ಕ್ಕಿಂತಲೂ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂದರು.
ಕಾಂಗ್ರೆಸ್ ನವರು ರಾಹುಲ್ ಗಾಂಧಿಯನ್ನು ಲೀಡರ್ ಮಾಡಲು ಹೊರಟಿದ್ದಾರೆ. ಆದರೆ, ಅವರು ಲೀಡರ್ ಆಗಲು ಸಿದ್ದರಿಲ್ಲ. ಅವರಿಗೆ ಮದುವಿ ಮಾಡಲು ಮದುಮಗನೇ ರೆಡಿ ಇಲ್ಲ. ಮದುವೆ ಆಗದ ಹುಚ್ಚು ಬಿಡುವುದಿಲ್ಲ, ಹುಚ್ಚು ಬಿಡದೆ ಮದುವೆ ಆಗುವುದಿಲ್ಲ ಎನ್ನುವಂತಾಗಿದೆ ಅವರ ಪರಿಸ್ಥಿತಿ ಎಂದು ಹೇಳಿದರು.ನರೇಂದ್ರ ಮೋದಿಯವರು ಯಾಕೆ ಬೇಕು ಎಂದರೆ ಅವರು ಸಾಮಾನ್ಯ ಕುಟುಂಬದಿಂದ ಬಂದಿದ್ದಾರೆ. ಅವರು ಅಪ್ಪಟ ದೇಶಭಕ್ತರು.
ಅವರ ತಾಯಿ ತೀರಿಕೊಂಡಾಗ ಮೂರು ಗಂಟೆಯಲ್ಲಿ ಅಂತ್ಯಕ್ರಿಯೆ ಮಾಡಿ, ಮತ್ತೆ ದೇಶದ ಕೆಲಸಕ್ಕೆ ತೊಡಗಿದರು. ಮೋದಿಯವರು ಬಂದ ಮೇಲೆ ಭಯೋತ್ಪಾದನೆ ನಿಂತು ಹೋಗಿದೆ. ಮನಮೋಹನ್ ಸಿಂಗ್ ಇದ್ದಾಗ ಭಯೋತ್ಪಾದನೆ ನಡೆದರೆ ಪಾಕಿಸ್ತಾನದವರಿಗೆ ಪತ್ರ ಬರೆಯುತ್ತಿದ್ದರು. ಮೋದಿಯವರು ಭಯೋತ್ಪಾದಕರನ್ನೆ ಹೊಡೆದುರುಳಿಸಿದ್ದಾರೆ. ಈಗ ಭಯೋತ್ಪಾದಕರಿಗೆ ಭಯ ಹುಟ್ಟಿಸಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ನವರು 1972 ರಲ್ಲಿ ಗರೀಬಿ ಹಠಾವೊ ಅಂತ ಹೇಳಿ ತಮ್ಮ ರಾಜಕೀಯ ರೊಟ್ಟಿ ಬೇಯಿಸಿಕೊಂಡರು. ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ 25 ಕೋಟಿ ಜನರು ಬಡತನದಿಂದ ಮೇಲೆ ಬಂದಿದ್ದಾರೆ. ಜನಸಂಖ್ಯೆ ಶಾಪ ಅಂತಿದ್ದರು. ಅದೇ ಜನಸಂಖ್ಯೆಯನ್ನು ಆಸ್ತಿಯನ್ನಾಗಿ ಬಳಕೆ ಮಾಡಿಕೊಂಡವರು ಪ್ರಧಾನಿ ಮೋದಿಯವರು, 4 ಕೋಟಿ ಮನೆ ನಿರ್ಮಾಣ ಮಾಡಿದ್ದಾರೆ. ಪ್ರತಿ ಮನೆಗೂ ಉಚಿತ ಹತ್ತು ಕೆಜಿ ಅಕ್ಕಿ ಕೊಟ್ಟಿದ್ದಾರೆ.. ಸಿದ್ದರಾಮಯ್ಯ ಒಂದುಕಾಳು ಅಕ್ಕಿ ಕೂಡ ಕೊಟ್ಟಿಲ್ಲ. ಈಗ ಲಕ್ಷಗಟ್ಟಲೆ ರೇಷನ್ ಕಾರ್ಡ್ ರದ್ದು ಮಾಡಿದ್ದಾರೆ. ರೇಷನ್ ಕಾರ್ಡ್ ಮಾಡಿಕೊಡಲು 15 ಸಾವಿರ ರೂ. ಮಾಮೂಲಿ ಕೇಳುತ್ತಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಅವಧಿಯಲ್ಲಿ ಎಲ್ಲವೂ ದುಬಾರಿ
ರಾಜ್ಯದಲ್ಲಿ ಬರಗಾಲ ಬಂದಿದೆ. ಒಂದು ಬೋರ್ ವೆಲ್ ಹಾಕಿಸಲು ಆಗುತ್ತಿಲ್ಲ. ಬೊರ್ ವೆಲ್ಗೆ ಕರೆಂಟ್ ಪಡೆಯಲು ಟಿಸಿ ಹಾಕಿಸಲು ಎರಡೂವರೆ ಲಕ್ಷ ರೂ. ಪಡೆಯುತ್ತಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಎಲ್ಲವೂ ದುಬಾರಿಯಾಗಿದೆ. ಇದು ಇದ್ದೂ ಇಲ್ಲದಂತಾದ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಕೊವಿಡ್ ಸಂದರ್ಭದಲ್ಲಿ ಮೋದಿ ದೇಶದ ಎಲ್ಲ ಪ್ರಜೆಗಳಿಗೂ ಮೂರು ಬಾರಿ ಲಸಿಕೆ ಹಾಕಿಸಿದರು. ಅವರಿಗೆ ಧನ್ಯವಾದ ಹೇಳುವ ಸಮಯ ಬಂದಿದೆ. ಮೋದಿಯವರು ಅನ್ನ, ನೀರು ಕೊಟ್ಟಿದ್ದಾರೆ. ಅವರಿಗೆ ಮತದಾನ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸಬೇಕು ಎಂದು ಹೇಳಿದರು.
ನೀರಾವರಿಗೆ ಆದ್ಯತೆ
ಬೆಳ್ಳಟ್ಟಿ ಗ್ರಾಮದ ಸುತ್ತಲಿನ ಗ್ರಾಮಗಳಿಗೆ ಸಂಪೂರ್ಣ ಕೆರೆ ತುಂಬಿಸುವ ಕೆಲಸ ಮಾಡುತ್ತೇನೆ. ಸಿಂಗಟಾಲೂರು ಯೋಜನೆಯನ್ನು ಶಿರಹಟ್ಟಿ ಭಾಗಕ್ಕೂ ತರುತ್ತೇನೆ. ನಿವೆಲ್ಲರೂ ಆಶೀರ್ವಾದ ಮಾಡಬೇಕು. ಮೋದಿಯವರ ಜೊತೆ ಅನೇಕ ಪಕ್ಷಗಳು ಬರುತ್ತಿವೆ. ರಾಜ್ಯದಲ್ಲಿ ದೇವೇಗೌಡ, ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಮೈತ್ರಿಯಾಗಿರುವುದರಿಂದ ನಮಗೆ ದೊಡ್ಡ ಶಕ್ತಿ ಬಂದಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಿವಪ್ರಕಾಶ್ ಮಹಾಜನಶೆಟ್ಟರ್, ಎಂ, ಎಸ್, ದೊಡಗೌಡರ, ಪಂಚಮಸಾಲಿ ಸಮಾಜದ ಲಕ್ಷ್ಮೇಶ್ವರ ತಾಲೂಕು ಅಧ್ಯಕ್ಷ ಮಂಜುನಾಥ ಮಾಗಡಿ, ಸಣ್ಣವೀರಪ್ಪ ಹಳೆಪ್ಪನವರ್ ಸೇರಿದಂತೆ ಅನೇಕ ಮುಖಂಡರು ಬಿಜೆಪಿ ಸೇರ್ಪಡೆಯಾದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ.ಸಿ. ಪಾಟೀಲ್, ಶಾಸಕ ಚಂದ್ರು ಲಮಾಣಿ, ಮುಖಂಡರಾದ ಎಂ ಎಸ್ ಕರಿಗೌಡ್ರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.