ಯುಗಾದಿ ಹಬ್ಬದಿಂದ ವಾತಾವರಣದಲ್ಲಿ ಬದಲಾವಣೆಯಾಗಿದ್ದು, ರಾಜ್ಯದ ವಿವಿದೆಡೆ ಮಳೆಯಾಗುತ್ತಿದೆ. ಇದರ ಜೊತೆಗೆ ಸಿಡಿಲಿಗೆ ಜನರು ಬಲಿಯಾಗುತ್ತಿದ್ದಾರೆ. ಹಾಗಾದ್ರೆ, ಈ ಸಿಡಿಲು ಹೇಗೆ ಬಡೆಯುತ್ತೆ? ಅದರಿಂದ ತಪ್ಪಿಸಿಕೊಳ್ಳುವುದೇಗೆ? ಎನ್ನುವ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳಿ
ಬೆಂಗಳೂರಿನಲ್ಲಿ IPL ಪಂದ್ಯ: ಕ್ರೀಡಾಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ನಮ್ಮ ಮೆಟ್ರೋ!
ಕಳೆದ ಎರಡ್ಮೂರು ದಿನಗಳಲ್ಲಿ ಸಿಡಿಲಿಗೆ ರಾಜ್ಯದಲ್ಲಿ ಸುಮಾರು ಐದಾರು ಜನ ಸಾವನ್ನಪ್ಪಿದ್ದಾರೆ. ಈಗ ಮಳೆಗಾಲ ಪ್ರಾರಂಭವಾಗುತ್ತಿರುವುದರಿಂದ ಜನ ಜಾಗೃತರಾಗಿರಬೇಕು. ಅದರಲ್ಲೂ ಹೊಲ, ಜಮೀನುಗಳಲ್ಲಿ ಇರುವವರು ಮಳೆ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಯಾಕಂದ್ರೆ ಯಾವ ಸಮಯದಲ್ಲಿ ಸಿಡಿಲು ಎಲ್ಲಿ ಬಡೆಯುತ್ತೆ ಎನ್ನುವುದೇ ಗೊತ್ತಾಗಲ್ಲ. ಹಾಗಾಗಿ ಜನ ಇದರಿಂದ ಎಚ್ಚರಿಕೆಯಿಂದ ಇರಬೇಕು. ಇನ್ನು ಸಿಡಿಲಾಘಾತದಿಂದ ಪಾರಾಗುವುದು ಹೇಗೆ? ಯಾವೆಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬಹುದು ? ಎನ್ನುವ ಮಾಹಿತಿ ಇಲ್ಲಿದೆ ನೋಡಿ!
ಏಪ್ರಿಲ್-ಮೇ ತಿಂಗಳಿನ ಹೊತ್ತಿಗೆ ಆಗಸದಲ್ಲಿ ಮುಂಗಾರು ಪೂರ್ವದ ದಟ್ಟ ಕಪ್ಪು ಮೋಡಗಳು ಕವಿಯಲಾರಂಭಿಸುತ್ತವೆ. ಇವುಗಳನ್ನು ‘ಕ್ಯುಮುಲೋನಿಂಬಸ್’ ಮೋಡಗಳೆನ್ನುತ್ತಾರೆ. ಇವುಗಳ ತಳ ಭೂಮಿಯಿಂದ ಸುಮಾರು 2 ಕಿಲೋಮೀಟರ್ ದೂರವಿರುತ್ತದೆ. ಅವುಗಳ ಮೇಲ್ತುದಿ ಸುಮಾರು 15 ಕಿಲೋಮೀಟರ್ ಎತ್ತರದಲ್ಲಿರುತ್ತದೆ. ಗಾಳಿ ಬೀಸುವಾಗ ಮೋಡದ ಕಣಗಳು ಪರಸ್ಪರ ಢಿಕ್ಕಿ ಹೊಡೆದು ಇಲೆಕ್ಟ್ರಾನ್ಗಳನ್ನು ಬಿಡುಗಡೆಗೊಳಿಸುತ್ತವೆ. ಬಿಡುಗಡೆಯಾದ ಇಲೆಕ್ಟ್ರಾನ್ಗಳು ದೊಡ್ಡ ಮೋಡಗಳ ತಳಭಾಗದಲ್ಲಿ ಸಂಗ್ರಹಗೊಳ್ಳುತ್ತವೆ. ಹೀಗೆ ಮುಂದುವರಿದಂತೆ ಮೋಡದ ತಳಭಾಗದಲ್ಲಿ ಋುಣ ವಿದ್ಯುತ್ ಕ್ಷೇತ್ರ ಸಂಚಯನವಾಗುತ್ತದೆ. ಇದೇ ಹೊತ್ತಿಗೆ ಭೂಮಿಯ ಮೇಲ್ಭಾಗದಲ್ಲಿ ಧನ ವಿದ್ಯುತ್ ಕ್ಷೇತ್ರ ಸಂಚಯನವಾಗಿದ್ದರೆ, ಮೋಡದ ಋುಣ ವಿದ್ಯುತ್ ಶಕ್ತಿ ಇತ್ತ ಕಡೆಗೆ ನುಗ್ಗಿ ಬರುತ್ತದೆ. ಇದೇ ಮಿಂಚು. ಋುಣ ಆವೇಶ ದೊಡ್ಡ ಪ್ರಮಾಣದಲ್ಲಿದ್ದಾಗ ಸಿಡಿಲು ಉಂಟಾಗುತ್ತದೆ.
ಸಿಡಿಲಿನಿಂದ ರಕ್ಷಣೆ ಹೇಗೆ?
ಗುಡುಗು- ಮಿಂಚು ಬರಲಿದೆ ಎಂದು ಗೊತ್ತಾದಾಗ ನೀವು ಹೊಲದಲ್ಲಿದ್ದರೆ, ಹತ್ತಿರದಲ್ಲಿರುವ ಯಾವುದೇ ಕಟ್ಟಡದಲ್ಲಿ ಅಥವಾ ಪಂಪ್ಹೌಸ್ನಲ್ಲಿ ಆಶ್ರಯ ಪಡೆಯಿರಿ.
ಬಯಲು ಪ್ರದೇಶದಲ್ಲಿದ್ದರೆ ತಕ್ಷ ಣವೇ ಇರುವುದರಲ್ಲಿ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಿ. ನಿಲ್ಲಬೇಡಿ.
ಬಯಲಿನಲ್ಲಿದ್ದರೆ, ಅಲ್ಲಿ ಮಲಗಬೇಡಿ. ಒದ್ದೆ ನೆಲದೊಂದಿಗೆ ನಿಮ್ಮ ಇಡೀ ದೇಹಕ್ಕೆ ಸಂಪರ್ಕವಿರಬಾರದು. ಕುಕ್ಕರುಗಾಲಿನಲ್ಲಿ ಕುಳಿತು, ನಿಮ್ಮ ತಲೆಯನ್ನು ಮೊಣಕಾಲುಗಳ ನಡುವೆ ಹುದುಗಿಸಿಕೊಳ್ಳಿ. ಇದು ಮಿಂಚಿನಿಂದ ಮೆದುಳಿಗೂ, ಹೃದಯಕ್ಕೂ ಆಗುವ ಹಾನಿಯನ್ನು ತಪ್ಪಿಸುತ್ತದೆ
ಮರಗಳಿದ್ದ ಪ್ರದೇಶದಲ್ಲಿ ನೀವು ಇದ್ದರೆ, ಅಲ್ಲಿಂದ ಬೇಗನೆ ಹೊರಬರುವುದು ಒಳ್ಳೆಯದು. ಯಾಕೆಂದರೆ ಸಿಡಿಲು ಮೋಡದಿಂದ ಭೂಮಿಗೆ ಹರಿಯಲು ಮರದಂತಹ ಹಸಿ, ಒದ್ದೆ ವಸ್ತುವನ್ನೇ ಆರಿಸಿಕೊಳ್ಳುತ್ತದೆ.
ಮರಗಳ ಗುಂಪಿನ ನಡುವೆ ನೀವು ಇದ್ದರೆ, ಇದ್ದುದರಲ್ಲಿ ಸಣ್ಣ ಮರದ ಕೆಳಗೆ ನಿಲ್ಲಿ. ದೊಡ್ಡ ಮರಗಳು ಸಿಡಿಲಿಗೆ ಸುಲಭದ ತುತ್ತು.
ಎತ್ತರದ ಗುಡ್ಡದ ಮೇಲಿದ್ದರೆ ತಗ್ಗಿಗೆ ಇಳಿಯಿರಿ.
ಕುರಿ ಅಥವಾ ಜಾನುವಾರುಗಳ ಮಧ್ಯೆ ನಿಂತಿದ್ದರೆ, ಅವುಗಳ ಮಧ್ಯದಲ್ಲಿ ಬಗ್ಗಿ ಕುಳಿತುಕೊಳ್ಳಿ. ಯಾಕೆಂದರೆ ಮಿಂಚು ಪ್ರಾಣಿಗಳಿಗಿಂತ ಎತ್ತರವಿರುವ ಮನುಷ್ಯನನ್ನೇ ಆರಿಸಿಕೊಳ್ಳುತ್ತದೆ.
ಕೆರೆಯಲ್ಲಿ ಈಜುವುದು, ಸ್ನಾನ ಮಾಡುವುದು ಬೇಡ. ನೀರಿನಲ್ಲಿದ್ದರೆ ತಕ್ಷಣ ಹೊರಬನ್ನಿ.
ವಿದ್ಯುತ್ ಕಂಬ, ಎಲೆಕ್ಟ್ರಿಕ್ ಟವರ್, ಮೊಬೈಲ್ ಟವರ್, ಟ್ರಾನ್ಸ್ಫಾರ್ಮರ್ ಮುಂತಾದವುಗಳ ಹತ್ತಿರವೂ ಇರಬೇಡಿ.
ತಂತಿಬೇಲಿ, ಬಟ್ಟೆ ಒಣಹಾಕುವ ತಂತಿ, ರೈಲ್ವೆ ಹಳಿ ಮತ್ತು ಪೈಪ್ಗಳಿಂದ ದೂರವಿರಿ. ಇವು ದೂರದಿಂದಲೇ ಮಿಂಚನ್ನು ಸೆಳೆಯುತ್ತವೆ.
ಮಳೆ ಬರುವ ಸಮಯದಲ್ಲಿ ಮನೆಯ ಟೆರೇಸನ್ನು ಸ್ವಚ್ಛ ಮಾಡುವ ಸಾಹಸ ಬೇಡ.
ಮನೆಯ ಕಿಟಕಿಯ ಬಳಿ ನಿಲ್ಲುವುದಕ್ಕಿಂತಲೂ ಮನೆಯ ಮಧ್ಯದಲ್ಲಿರುವುದು ಸುರಕ್ಷಿತ.
ಗುಡುಗು-ಸಿಡಿಲಿನ ಸಂದರ್ಭದಲ್ಲಿ ಫೋನ್ ಮಾಡಬೇಡಿ. ಅದನ್ನು ದೂರವಿರಿಸಿ. ಅದನ್ನು ಚಾರ್ಜ್ ಮಾಡುವ ಸಾಹಸವೂ ಬೇಡ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ ಕಾರಿನ ಗಾಜುಗಳನ್ನು ಮುಚ್ಚಿಕೊಳ್ಳಿ. ಕಾರಿನ ಬಾಡಿಯನ್ನು ಸಾಧ್ಯವಾದಷ್ಟು ಸ್ಪರ್ಶಿಸದೆ ಮಧ್ಯದಲ್ಲಿ ಕುಳಿತುಕೊಳ್ಳುವುದು ಒಳ್ಳೆಯದು.
ಮನೆಗೆ ಮಿಂಚುಬಂಧಕವನ್ನು ಅಳವಡಿಸುವುದು ಕ್ಷೇಮ. ಇದು ಲೋಹದ ಒಂದು ಕಡ್ಡಿಯಾಗಿದ್ದು, ಮನೆಯ ಎತ್ತರ ಪ್ರದೇಶದಲ್ಲಿ ಇರುತ್ತದೆ. ಇದರಿಂದ ಒಂದು ತಂತಿಯ ಸಂಪರ್ಕ ನೇರವಾಗಿ ಭೂಮಿಗೆ ಇರುತ್ತದೆ. ಇದು ಮಿಂಚಿನ ಪ್ರವಾಹವನ್ನು ಆಕರ್ಷಿಸಿ ಭೂಮಿಗೆ ಸಾಗಿಸುತ್ತದೆ.
ಕಂಪ್ಯೂಟರ್ಗಳಲ್ಲಿ ಕೆಲಸ ಮಾಡುವವರಾದರೆ ಸ್ವಲ್ಪ ಹೊತ್ತು ಅದರಿಂದ ದೂರ ಇರಿ.