ಅಪಾರ ಅಬಿಮಾನಿಗಳನ್ನು ಹೊಂದಿರುವ RCB ತಂಡವು ಈ ಬಾರಿ ಸತತ ಸೋಲುಗಳ ಮೂಲಕ ಫ್ಯಾನ್ಸ್ ಗಳಿಗೆ ಬೇಸರ ತರಿಸಿದ್ದಾರೆ. ಆಡಿರುವ 6 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಗೆದ್ದು, ಇನ್ನುಳಿದ ಐದೂ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆ ಮೂಲಕ ಟೂರ್ನಿಯ ಪಾಯಿಂಟ್ಸ್ ಟೇಬಲ್ನಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ. ಮುಂದಿನ 8 ಪಂದ್ಯಗಳು ಆರ್ಸಿಬಿ ಪಾಲಿಗೆ ಅತ್ಯಂತ ನಿರ್ಣಾಯಕವಾಗಿವೆ. ಅಂದ ಹಾಗೆ ಆರ್ಸಿಬಿ ತಂಡದ ಪ್ಲೇಆಫ್ ಲೆಕ್ಕಾಚಾರದ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದದ ತನ್ನ ಆರನೇ ಪಂದ್ಯದಲ್ಲಿ ಆರ್ಸಿಬಿ 197 ರನ್ಗಳ ಕಠಿಣ ಗುರಿ ನೀಡಿದ್ದರ ಹೊರತಾಗಿಯೂ ಬೌಲಿಂಗ್ ವೈಫಲ್ಯದಿಂದ 7 ವಿಕೆಟ್ಗಳಿಂದ ಸೋಲು ಒಪ್ಪಿಕೊಂಡಿತ್ತು. ತವರು ಅಂಗಣದಲ್ಲಿ ಅಬ್ಬರಿಸಿದ್ದ ಮುಂಬೈ ದಾಂಡಿಗರು, ಇನ್ನು 4.3 ಓವರ್ಗಳು ಬಾಕಿ ಇರುವಾಗಲೇ 199 ರನ್ ಗಳಿಸಿ ಗೆಲುವು ಪಡೆದುಕೊಂಡಿದ್ದರು.
197 ರನ್ ಗುರಿ ಹಿಂಬಾಲಿಸಿದ್ದ ಮುಂಬೈ ಇಂಡಿಯನ್ಸ್ ಪರ ಪವರ್ಪ್ಲೇನಲ್ಲಿ ಇಶಾನ್ ಕಿಶನ್ ಅಬ್ಬರಿಸಿದ್ದರು. ಇವರು ಆಡಿದ್ದ 34 ಎಸೆತಗಳಲ್ಲಿ 69 ರನ್ ಸಿಡಿಸಿದ್ದರೆ, ಸೂರ್ಯಕುಮಾರ್ ಯಾದವ್ 19 ಎಸೆತಗಳಲ್ಲಿ 52 ರನ್ ಸಿಡಿಸಿ ಮುಂಬೈ ತಂಡವನ್ನು ಗೆಲುವಿನ ಸನಿಹ ತಂದು ವಿಕೆಟ್ ಒಪ್ಪಿಸಿದರು.
ಈ ಸೋಲಿನ ಬಳಿಕ ಆರ್ಸಿಬಿ ಪಾಯಿಂಟ್ಸ್ ಟೇಬಲ್ನಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ. ಒಟ್ಟು ಆಡಿರುವ 6 ಪಂದ್ಯಗಳಲ್ಲಿ ಆರ್ಸಿಬಿ 5 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.
ಮುಂಬೈ ಇಂಡಿಯನ್ಸ್ ವಿರುದ್ಧ ಸೋಲಿನ ಬಳಿಕ ಆರ್ಸಿಬಿಯ ಪ್ಲೇಆಫ್ ಹಾದಿ ಕಠಿಣವಾಗಿದೆ. ಕಳೆದ ಆರು ಪಂದ್ಯಗಳ ಪೈಕಿ ಮೂರು ಪಂದ್ಯಗಳಲ್ಲಿ ಫಾಫ್ ಡು ಪ್ಲೆಸಿಸ್ ಗೆದ್ದಿದ್ದರೆ, ಬೆಂಗಳೂರು ತಂಡದ ಪ್ಲೇಆಫ್ ಹಾದಿಯ ಸಂಗತಿಗಳು ಸಲೀಸಾಗಿ ಇರುತ್ತಿತ್ತು. ಆರ್ಸಿಬಿಗೆ ಮುಂದಿನ ಕೆಲ ವಾರಗಳಲ್ಲಿ ಕಠಿಣ ಸವಾಲು ಎದುರಾಗಲಿದೆ. ಮುಂದಿನ ಎರಡು ವಾರಗಳಲ್ಲಿ ಆರ್ಸಿಬಿಯ ಪ್ಲೇಆಫ್ ಅರ್ಹತೆಯ ಬಗ್ಗೆ ಸ್ಪಷ್ಟತೆ ಬಗ್ಗೆ ತಿಳಿಯಲಿದೆ. ಸೋಮವಾರ ತವರು ಅಂಗಣ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ತನ್ನ ಮುಂದಿನ ಪಂದ್ಯವಾಡಲಿದೆ.
ಪ್ಯಾಟ್ ಕಮಿನ್ಸ್ ನಾಯಕತ್ವದ ಸನ್ರೈಸರ್ಸ್ ಹೈದರಾಬಾದ್ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಳಲ್ಲಿ ಬಲಿಷ್ಠವಾಗಿದೆ. ಆಡಿರುವ 5 ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಪಡೆದು ಉತ್ತಮ ಹಾದಿಯಲ್ಲಿದೆ. ಹಾಗಾಗಿ ಸೋಮವಾರದ ಪಂದ್ಯದಲ್ಲಿ ಎಸ್ಆರ್ಎಚ್ ವಿರುದ್ದ ಆರ್ಸಿಬಿ ಗೆಲ್ಲಲೇಬೇಕಾಗಿದೆ. ಒಂದು ವೇಳೆ ಸೋತರೆ ಇನ್ನುಳಿದ 7 ಪಂದ್ಯಗಳಲ್ಲಿ ಆರ್ಸಿಬಿ ಕಡ್ಡಾಯವಾಗಿ ಗೆಲ್ಲಬೇಕು, ಆದರೂ ಪ್ಲೇಆಫ್ ಅರ್ಹತೆ ಇತರೆ ತಂಡಗಳ ಫಲಿತಾಂಶವನ್ನು ಅವಂಬಿಸಬೇಕಾಗುತ್ತದೆ.
ನಂತರ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಆಡಲು ಈಡನ್ ಗಾರ್ಡನ್ಸ್ಗೆ ಆರ್ಸಿಬಿ ಪ್ರಯಾಣ ಬೆಳೆಸಲಿದೆ. ಇದೇ ತಂಡದ ವಿರುದ್ದ ತನ್ನ ಮೊದಲನೇ ಪಂದ್ಯದಲ್ಲಿ ಆರ್ಸಿಬಿ ಸೋಲು ಅನುಭವಿಸಿತ್ತು. ಎಸ್ಆರ್ಎಚ್ ಹಾಗೂ ಕೆಕೆಆರ್ ಎರಡರ ವಿರುದ್ಧವೂ ಬೆಂಗಳೂರು ತಂಡ ಗೆಲ್ಲಬೇಕು. ಕೆಕೆಆರ್ ಪಂದ್ಯದ ಬಳಿಕ ಹೈದರಾಬಾದ್ಗೆ ಪ್ರಯಾಣ ಬೆಳೆಸಲಿರುವ ಆರ್ಸಿಬಿ, ಎಸ್ಆರ್ಎಚ್ ತಂಡವನ್ನು ಎರಡನೇ ಬಾರಿ ಎದುರಿಸಲಿ. ನಂತರ ವಾರದ ಅಂತರದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಬೆಂಗಳೂರು ತಂಡ ಎರಡು ಬಾರಿ ಎದುರಿಸಲಿದೆ.
ಜಿಟಿ ವಿರುದ್ಧ ಎರಡು ಪಂದ್ಯಗಳನ್ನು ಮುಗಿಸಿದ ಬಳಿಕ ಆರ್ಸಿಬಿ ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಬೆಂಗಳೂರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ಸಿಬಿ ಸೆಣಸಲಿದೆ. ಅಲ್ಲಿಗೆ ಆರ್ಸಿಬಿ 13 ಪಂದ್ಯಗಳು ಮುಗಿಯಲಿವೆ. ಆ ಮೂಲಕ ಆರ್ಸಿಬಿ 6 ಪಂದ್ಯಗಳನ್ನು ಗೆದ್ದುಕೊಂಡರೆ, ಆಗ 14 ಅಂಕಗಳನ್ನು ಕಲೆ ಹಾಕಲಿದೆ. ನಂತರ ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಒಟ್ಟಾರೆ ಕೊನೆಯ 8 ಪಂದ್ಯಗಳಲ್ಲಿ ಆರ್ಸಿಬಿ ಕನಿಷ್ಠ 7 ಪಂದ್ಯಗಳನ್ನು ಗೆದ್ದರೆ ಪ್ಲೇಆಫ್ಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ 6ರಲ್ಲಿ ಗೆದ್ದರೂ ಪ್ಲೇಆಫ್ ಅರ್ಹತೆಯು ಇತರೆ ತಂಡಗಳ ಫಲಿತಾಂಶವನ್ನು ಅವಲಂಬಿಸಬೇಕಾಗುತ್ತದೆ