ಹಾಸನ :– ಇನ್ನೊಂದು ವರ್ಷದಲ್ಲಿ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಖಚಿತ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ದೇವರ ಇಚ್ಛೆಯಿಂದ ನಿಮ್ಮ ಸೇವೆ ಮಾಡಲು ನನಗೆ ಇನ್ನೊಂದು ಅವಕಾಶ ಸಿಗುತ್ತದೆ. ನಾನು ಮೂರು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ನಿಮ್ಮ ಆಶೀರ್ವಾದದಿಂದಲೇ ನನಗೆ ಮೂರನೇ ಜನ್ಮ ಸಿಕ್ಕಿದೆ. ಈ ಜನ್ಮದಲ್ಲಿ ಇನ್ನೊಂದು ವರ್ಷದೊಳಗೆ ನಿಮ್ಮ ಸೇವೆಗೆ ಅವಕಾಶ ಸಿಗಲಿದೆ ಎಂದಿದ್ದಾರೆ. ಕುಮಾರಸ್ವಾಮಿ ಮತ್ತೆ ಸಿಎಂ ಆಗುವ ಬಗ್ಗೆ ಮಾರ್ಮಿಕವಾಗಿ ಈ ರೀತಿ ಸುಳಿವು ನೀಡಿದ್ದಾರೆಯೇ ಎಂಬ ಗುಸುಗುಸು ಇದೀಗ ಆರಂಭವಾಗಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದಕ್ಕೆ ನಮಗೆ ಹೊಟ್ಟೆಕಿಚ್ಚು ಇಲ್ಲ. ಆದರೆ, ಈಗಿನ ಬೆಳವಣಿಗೆಗಳನ್ನು ನೋಡಿದರೆ ರಾಜ್ಯ ಎಲ್ಲಿಗೆ ಹೋಗುತ್ತದೋ ಎಂಬ ಆತಂಕ ಕಾಡುತ್ತಿದೆ. ಉಚಿತ ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್ ಪಕ್ಷವೇನೂ ಅದರ ಹಣ ಖರ್ಚು ಮಾಡುತ್ತಿಲ್ಲ. ಬದಲಾಗಿ ಜನರ ಹಣದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
1.05 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಈ ಪೈಕಿ 58,000 ಕೋಟಿ ರೂ.ಗಳನ್ನು ಗ್ಯಾರಂಟಿಗಳಿಗೆ ವ್ಯಯಿಸುತ್ತಿದ್ದಾರೆ. ರಾಜ್ಯದಲ್ಲಿ 6.87 ಲಕ್ಷ ಕೋಟಿ ಸಾಲವಿದೆ. ಅದನ್ನು ಮರುಪಾವತಿ ಮಾಡುವವರು ಯಾರು? ಇಂದು ಕಾಂಗ್ರೆಸ್ ಸರ್ಕಾರ ಇದೆ, ನಾಳೆ ಹೋಗುತ್ತಾರೆ. ಜನರು ಅದನ್ನು ಮರುಪಾವತಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.