ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಿನಿಮಾದಲ್ಲಿ ನಟಿಸುವ ಆಫರ್ ನೀಡುವುದಾಗಿ ಆಮಿಷವೊಡ್ಡಿದ ವ್ಯಕ್ತಿಯೋರ್ವ ಯುವತಿಯಿಂದ ಲಕ್ಷ ಲಕ್ಷ ಪೀಕಲು ಮುಂದಾದ ಘಟನೆ ನಡೆದಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಸಿನಿಮಾದಲ್ಲಿ ನಟಿಸುವ ಅವಕಾಶ ನೀಡುವುದಾಗಿ ಹೇಳಿದ ರೋಹನ್ ಎಂಬಾತ ಯುವತಿಯಿಂದ ಬರೋಬ್ಬರಿ ಆರು ಲಕ್ಷ ರೂಪಾಯಿ ವಂಚಿಸಲು ಮುಂದಾಗಿದ್ದಾನೆ.
ಮುಂಬೈನ ಪೂಜಾ ಎನ್ನುವ ಯುವತಿಗೆ ಕಾಲ್ ಮಾಡಿದ್ದ ವ್ಯಕ್ತಿಯು ತಾನು ರೋಹನ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಅಕ್ಷಯ್ ಕುಮಾರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಕೇಪ್ ಆಫ್ ಗುಡ್ ಫಿಲ್ಮ್ಸ್ ಕಡೆಯಿಂದ ಸಿನಿಮಾ ಆಗುತ್ತಿದ್ದು, ಅದರಲ್ಲಿ ನೀವು ಶಾರ್ಟ್ ಲಿಸ್ಟ್ ಆಗಿದ್ದೀರಿ ಎಂದು ಹೇಳಿದ್ದಾನೆ. ಪ್ರೊಫೈಲ್ ಬಿಲ್ಡ್ ಮಾಡಲು ಆರು ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾನೆ.
ರೋಹನ್ ಮಾತಿನಿಂದ ಅನುಮಾನಗೊಂಡ ಹುಡುಗಿ ನೇರವಾಗಿ ಅಕ್ಷಯ್ ಕುಮಾರ್ ಮ್ಯಾನೇಜರ್ ಗೆ ಕಾಲ್ ಮಾಡಿದ್ದಾಳೆ. ಆಗ ತಾನು ಮೋಸ ಹೋಗುತ್ತಿರುವ ವಿಚಾರ ಗೊತ್ತಾಗಿದೆ. ಕೂಡಲೇ ಮುಂಬೈನ ಜುಹು ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಹೇಳಿದಂತೆ ರೋಹನ್ ಭೇಟಿ ಮಾಡಲು ಕೇಳಿದ್ದಾಳೆ.
ಯುವತಿ ಹೇಳಿದ ಸ್ಥಳಕ್ಕೆ ಬಂದಿದ್ದ ರೋಹನ್ ನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ನಡೆಸಿದಾಗ ಅವರು ಅಸಲಿಯಾಗಿ ರೋಹನ್ ಅಲ್ಲ ಎನ್ನುವುದು ಗೊತ್ತಾಗಿದೆ. ಪ್ರಿನ್ಸ್ ಕುಮಾರ್ ತನ್ನ ಹೆಸರು ಬದಲಾಯಿಸಿಕೊಂಡು ಹೀಗೆ ಮೋಸ ಮಾಡುತ್ತಿದ್ದ ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.