ಬಾಲಿವುಡ್ ಬ್ಯೂಟಿ ನೋರಾ ಫತೇಹಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಐಟಂ ಡ್ಯಾನ್ಸ್ಗಳ ಮೂಲಕ ಮೋಡಿ ಮಾಡಿರುವ ನಟಿ ಇದೀಗ ಸಂದರ್ಶನವೊಂದರಲ್ಲಿ ಬಾಲಿವುಡ್ ನ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಸೆಲೆಬ್ರಿಟಿಗಳು ಲಾಭಕ್ಕಾಗಿ ಮದುವೆಯಾಗ್ತಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಫೇಮಸ್ ಇರುವ ತಮ್ಮ ಹೆಂಡತಿ ಅಥವಾ ಗಂಡನ ಹೆಸರನ್ನು ಈ ಜನರು ಬಳಸಿಕೊಳ್ಳುತ್ತಾರೆ. ಅದರಿಂದ ಚಿತ್ರರಂಗದಲ್ಲಿ ಸಂಪರ್ಕ ಹೆಚ್ಚಿಸಿಕೊಳ್ಳುತ್ತಾರೆ. ಹಣ ಗಳಿಸಲು ಮತ್ತು ಚಾಲ್ತಿಯಲ್ಲಿ ಇರಲು ಮದುವೆ ಆಗುತ್ತಾರೆ. ಆ ವ್ಯಕ್ತಿಯನ್ನು ಮದುವೆ ಆದರೆ ಮುಂದಿನ 3 ವರ್ಷಗಳ ಕಾಲ ತಾನು ಸುದ್ದಿಯಲ್ಲಿ ಇರಬಹುದು ಎಂಬುದು ಅವರ ಲೆಕ್ಕಚಾರ. ಯಾಕೆಂದರೆ, ಆ ವ್ಯಕ್ತಿಯ ಬಳಿ ಸಿನಿಮಾಗಳು ಇವೆ. ಆ ಸಿನಿಮಾ ಸೂಪರ್ ಹಿಟ್ ಆಗಲಿದೆ. ಆ ಅಲೆಯಲ್ಲಿ ಫೇಮಸ್ ಆಗಬಹುದು ಎಂಬ ಲೆಕ್ಕಾಚಾರ ಆಗಿರುತ್ತದೆ ಎಂದು ನೋರಾ ಹೇಳಿದ್ದಾರೆ.
ದುಡ್ಡಿಗಾಗಿ ಇದನ್ನೆಲ್ಲ ಮಾಡುತ್ತಾರೆ. ಹಣಕ್ಕಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಇಷ್ಟವೇ ಇಲ್ಲದ ವ್ಯಕ್ತಿಯನ್ನು ಮದುವೆ ಆಗಿ ಜೀವನ ಮಾಡುವುದಕ್ಕಿಂತ ಕೆಟ್ಟದ್ದು ಬೇರೆ ಏನೂ ಇಲ್ಲ. ವೈಯಕ್ತಿಕ ಜೀವನ, ಮಾನಸಿಕ ಆರೋಗ್ಯ ಮತ್ತು ಸಂತಸವನ್ನು ತ್ಯಾಗ ಮಾಡುವುದರಲ್ಲಿ ಅರ್ಥವಿಲ್ಲ. ಕೆಲಸ ಮತ್ತು ವೈಯಕ್ತಿಕ ಬದುಕನ್ನು ಮಿಶ್ರಣ ಮಾಡಬಾರದು ಎಂದಿದ್ದಾರೆ.
ನೋರಾ ಕನ್ನಡದಲ್ಲೂ ಕಾಣಿಸಿಕೊಂಡಿದ್ದಾರೆ. ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾದಲ್ಲಿ ನೋರಾ ಸೊಂಟ ಬಳುಕಿಸಿದ್ದಾರೆ. ಸಿನಿಮಾಗಳ ಜೊತೆ ಜೊತೆಗೆ ಜಾಹೀರಾತು ಕ್ಷೇತ್ರದಲ್ಲೂ ನೋರಾ ಸದ್ದು ಮಾಡ್ತಿದ್ದಾರೆ.