ನಟ ಶಿವರಾಜ್ ಕುಮಾರ್ ಪತ್ನಿ, ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ವಿರುದ್ಧ ಚುನಾವಣೆ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ. ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಗೀತಾ ಶಿವರಾಜ್ ಕುಮಾರ್ ಅವರು ಚುನಾವಣೆ ಸಮಯದಲ್ಲಿ ತಮ್ಮ ಸಿನಿಮಾದ ಜಾಹೀರಾತನ್ನು ನೀಡಿರುವುದರಿಂದ ಅದನ್ನು ಚುನಾವಣೆ ವೆಚ್ಚಕ್ಕೆ ಸೇರಿಸುವಂತೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ಗೀತಾ, ಶಿವರಾಜ್ ಕುಮಾರ್ ನಟನೆಯ ಭೈರತಿ ರಣಗಲ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಯುಗಾದಿ ಸಂದರ್ಭದಲ್ಲಿ ಈ ಸಿನಿಮಾದ ಜಾಹೀರಾತು ಅನ್ನು ಎಲ್ಲ ದಿನಪತ್ರಿಕೆಗಳಿಗೆ ನೀಡಲಾಗಿತ್ತು. ಜಾಹೀರಾತಿಗೆ ನೀಡಿದ ಹಣದ ಖರ್ಚನ್ನು ಚುನಾವಣೆ ವೆಚ್ಚದಲ್ಲಿ ಸೇರಿಸುವಂತೆ ಶಿಫಾರಸ್ಸು ಮಾಡಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಹಿಂದೆ ಶಿವರಾಜ್ ಕುಮಾರ್ ಚಿತ್ರಗಳನ್ನು ಮತ್ತು ಜಾಹೀರಾತುಗಳನ್ನು ತಡೆ ಹಿಡಿಯುವಂತೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿತ್ತು. ಆದರೆ ತಡೆಹಿಡಿಯಲು ಆಯೋಗ ನಿರಾಕರಿಸಿತ್ತು. ಈಗ ಮತ್ತೊಂದು ದೂರನ್ನು ನೀಡಲಾಗಿದೆ.