ಹೋಳಿಗೆಯನ್ನು ಹಲವು ರೀತಿಯಲ್ಲಿ, ಮಾಡಿ ಜನ ಸವಿಯುತ್ತಾರೆ. ತೊಗರಿಬೇಳೆ ಒಬ್ಬಟ್ಟು, ಕಡಲೇಪಪ್ಪು ಒಬ್ಬಟ್ಟು, ಕ್ಯಾರೆಟ್ ಒಬ್ಬಟ್ಟು, ಖೋವಾ ಒಬ್ಬಟ್ಟು ಸೇರಿದಂತೆ ನಾನಾ ಬಗೆಯಲ್ಲಿ ಹೋಳಿಗೆಯನ್ನು ಮಾಡಿ ಸವಿಯಲಾಗುತ್ತದೆ. ನೀವೂ ಈ ಯುಗಾದಿಯನ್ನು ಸ್ಪೆಷಲ್ ಆಗಿ ಆಚರಿಸಬೇಕೆಂದರೆ, ಬೇಳೆ ಬಿಟ್ಟು ತರವೇರಿಯಾದ ಒಬ್ಬಟ್ಟನ್ನು ಮಾಡಬೇಕೆಂದು ಅಂದುಕೊಂಡಿದ್ದರೆ ಈ ಆನಾನಸ್ ಹೋಳಿಗೆಯನ್ನು ಮಾಡಿ. ಈ ಹೋಳಿಗೆ ಮಾಡಲು ಸುಲಭವಾಗಿರುತ್ತದೆ ಹಾಗೇ ರುಚಿಯೂ ಬೊಂಬಾಟ್ ಆಗಿರುತ್ತದೆ.
IPL 2024: RCB ಪ್ಲೇ ಆಫ್ ಹಾದಿ ಕಠಿಣ- ಈ ಪಂದ್ಯಗಳಲ್ಲಿ ಗೆದ್ದರಷ್ಟೆ ಪ್ರವೇಶ!
ಅನಾನಸ್ ಹೋಳಿಗೆ ಮಾಡಲು ಬೇಕಾಗುವ ಸಾಮಾಗ್ರಿಗಳು: ಅನಾನಸ್ – 1 ಹಣ್ಣು, ಚಿರೋಟಿ ರವೆ – ಮುಕ್ಕಾಲು ಕಪ್, ಮೈದಾಹಿಟ್ಟು – ಕಾಲು ಕಪ್, ತುಪ್ಪ – 3 ಟೀ ಸ್ಪೂನ್, ಕೊಬ್ಬರಿ ತುರಿ – ಮುಕ್ಕಾಲು ಕಪ್, ಬೆಲ್ಲದ ಪುಡಿ – ಮುಕ್ಕಾಲು ಕಪ್, ಏಲಕ್ಕಿ ಪುಡಿ – 1 ಟೀ ಸ್ಪೂನ್, ಎಣ್ಣೆ – ಅಗತ್ಯಕ್ಕೆ ತಕ್ಕಷ್ಚು
ಅನಾನಸ್ ಹೋಳಿಗೆ ಮಾಡುವ ವಿಧಾನ
ಒಂದು ಅಗಲವಾದ ಪಾತ್ರೆಯಲ್ಲಿ ಅರ್ಧ ಕಪ್ ಚಿರೋಟಿ ರವೆ, ಕಾಲು ಕಪ್ ಮೈದಾಹಿಟ್ಟು, 3 ಟೀ ಸ್ಪೂನ್ ತುಪ್ಪ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಹಿಟ್ಟನ್ನು ನಾದಿಕೊಳ್ಳಬೇಕು. ಸ್ವಲ್ಪ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಹಿಟ್ಟು ನಾದಿಕೊಳ್ಳುತ್ತಾ 1 ಟೀ ಸ್ಪೂನ್ ಎಣ್ಣೆ ಹಾಕಿಕೊಂಡು ಮೃದುವಾಗಿ ಕಳಿಸಿಡಬೇಕು. ಹಿಟ್ಟಿನ ಮೇಲೆ 2 ಟೀ ಸ್ಪೂನ್ ಎಣ್ಣೆ ಹಾಕಿ ಹಿಟ್ಟು ನೆನೆಯಲು ತಟ್ಟೆಯನ್ನು ಮುಚ್ಚಿಡಬೇಕು.
ಸ್ಟೌವ್ ಮೇಲೆ ಪಾತ್ರೆ ಇಟ್ಟು ಕಟ್ ಮಾಡಿಟ್ಟುಕೊಂಡಿರುವ ಅನಾನಸ್ ಹಣ್ಣು ಸ್ವಲ್ಪ ನೀರು ಹಾಕಿ ಬೇಯಿಸಿಕೊಳ್ಳಬೇಕು. 5-8 ನಿಮಿಷಗಳ ಕಾಲ ತಟ್ಟೆ ಮುಚ್ಚಿಟ್ಟು ಬೇಯಿಸಿಕೊಳ್ಳಬೇಕು. ಅನಾನಸ್ ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಂಡು ಬೌಲ್ ಗೆ ಹಾಕಿಕೊಳ್ಳಬೇಕು. ಮತ್ತೆ ಮಿಕ್ಸಿ ಜಾರಿಗೆ ಮುಕ್ಕಾಲು ಕಪ್ ಕೊಬ್ಬರಿ ತುರಿ ಹಾಕಿ ರುಬ್ಬಿಕೊಳ್ಳಬೇಕು. ಇದನ್ನು ಅನಾನಸ್ ಪೇಸ್ಟ್ ಜೊತೆ ಮಿಕ್ಸ್ ಮಾಡಿಕೊಳ್ಳಬೇಕು.
ಮತ್ತೊಂದು ಬಾಣಲಿಯಲ್ಲಿ ಅರ್ಧ ಕಪ್ ಚಿರೋಟಿ ರವೆಯನ್ನು ಹಾಕಿ ಫ್ರೈ ಮಾಡಿಕೊಳ್ಳಬೇಕು.
ಸ್ಟೌವ್ ಮೇಲೆ ಪಾತ್ರೆ ಇಟ್ಟು ಮುಕ್ಕಾಲು ಕಪ್ ಬೆಲ್ಲದ ಪುಡಿ, ಸ್ವಲ್ಪ ನೀರನ್ನು ಹಾಕಿ ಬೆಲ್ಲ ಕರಗಿಸಿಕೊಳ್ಳಬೇಕು. ಕರಗಿಸಿದ ಬೆಲ್ಲವನ್ನು ಅನಾನಸ್ ಮಿಶ್ರಣಕ್ಕೆ ಹಾಕಿ ಮಿಕ್ಸ್ ಮಾಡಿ, ಲೋ ಫ್ಲೇಮ್ ನಲ್ಲಿ ಬಿಸಿ ಮಾಡಿಕೊಳ್ಳಬೇಕು. ಕುದಿ ಬರುವ ವೇಳೆ ಫ್ರೈ ಮಾಡಿರುವ ಚಿರೋಟಿ ರವೆಯನ್ನು ನಿಧಾನವಾಗಿ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಗಟ್ಟಿಯಾದರೆ ಸ್ವಲ್ಪ ಬಿಸಿ ನೀರನ್ನು ಸೇರಿಸಿಕೊಳ್ಳಬೇಕು. 2 ಟೀ ಸ್ಪೂನ್ ತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಅನಾನಸ್ ಪೇಸ್ಟ್ ಗಟ್ಟಿಯಾದ ಮೇಲೆ ಸ್ವಲ್ಪ ಏಲಕ್ಕಿ ಪುಡಿ ಹಾಕಿ ಸ್ಟೌವ್ ಆಫ್ ಮಾಡಿ ತಣ್ಣಗಾಗಲು ಬಿಡಬೇಕು.
ತಣ್ಣಗಾದ ಹೂರಣವನ್ನು ಉಂಡೆ ಮಾಡಿಕೊಂಡು ಕನಕದ ಉಂಡೆಯನ್ನು ತೆಗೆದುಕೊಂಡು ಒಬ್ಬಟ್ಟನ್ನು ತಟ್ಟಿಕೊಳ್ಳಬೇಕು. ಸ್ಟೌವ್ ಮೇಲೆ ತವಾ ಇಟ್ಟು ಎಣ್ಣೆ ಸವರಿ, ಒಬ್ಬಟ್ಟನ್ನು ಹಾಕಿ ಎರಡೂ ಸೈಡ್ ಸುಡಬೇಕು. ಈ ರೀತಿ ಮಾಡಿದರೆ ಅನಾನಸ್ ಒಬ್ಬಟ್ಟು ತಿನ್ನಲು ರೆಡಿಯಾಗುತ್ತದೆ.