ವಿದೇಶದ ಉನ್ನತ ಕೌಶಲ್ಯವುಳ್ಳ ವಿಜ್ಞಾನಿಗಳು, ಇಂಜಿನಿಯರ್ಗಳು, ವೈದ್ಯರು, ಕಲಾವಿದರು ಹಾಗೂ ತತ್ವಜ್ಞಾನಿಗಳಿಗೆ 5 ಸಾವಿರ ಉಚಿತ ಪಾಸ್ಪೋರ್ಟ್ ಒದಗಿಸುವುದಾಗಿ ಎಲ್ಸಾಲ್ವದಾರ್ ಅಧ್ಯಕ್ಷ ನಯೀಬ್ ಬುಕೆಲೆ ಘೋಷಿಸಿದ್ದಾರೆ.
ನಾವು 5000 ಉಚಿತ ಪಾಸ್ಪೋರ್ಟ್ಗಳನ್ನು (ನಮ್ಮ ಪಾಸ್ಪೋರ್ಟ್ ಯೋಜನೆಯಲ್ಲಿ 5 ಶತಕೋಟಿ ಡಾಲರ್ ಗೆ ಸಮ) ಒದಗಿಸುತ್ತೇವೆ. ಫಲಾನುಭವಿಗಳಿಗೆ ಮತದಾನದ ಅಧಿಕಾರ ಸೇರಿದಂತೆ ಪೂರ್ಣಪ್ರಮಾಣದ ಪೌರತ್ವ ಸ್ಥಾನಮಾನ ನೀಡಲಾಗುವುದು. ಎಲ್ಸಾಲ್ವದಾರ್ನ ಉಜ್ವಲ ಭವಿಷ್ಯವನ್ನು ಖಾತರಿಪಡಿಸುವುದು ಈ ಉಚಿತ ಪಾಸ್ಪೋರ್ಟ್ ಯೋಜನೆಯ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
ಪಾಸ್ಪೋರ್ಟ್ ಯೋಜನೆಯ ಫಲಾನುಭವಿಗಳು ತಮ್ಮ ಕುಟುಂಬ ಮತ್ತು ಆಸ್ತಿಗಳನ್ನು( ಸಾಫ್ಟ್ವೇರ್, ಬೌದ್ಧಿಕ ಆಸ್ತಿಗಳು) ಎಲ್ಸಾಲ್ವದಾರ್ಗೆ ಸ್ಥಳಾಂತರಗೊಳಿಸುವಾಗ ಯಾವುದೇ ತೆರಿಗೆ ಅಥವಾ ಸುಂಕಗಳನ್ನು ವಿಧಿಸುವುದಿಲ್ಲ ಎಂದು ನಯೀಬ್ ಬುಕೆಲೆ ತಿಳಿಸಿದ್ದಾರೆ.