ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ನಿರ್ಮಾಣದ ‘ಲವ್ ಸೆ*ಕ್ಸ್ ಔರ್ ದೋಖಾ 2’ ಸಿನಿಮಾ ಏಪ್ರಿಲ್ 19ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದ ಮೇಕಿಂಗ್ ವಿಡಿಯೋವೊಂದನ್ನು ನಿರ್ಮಾಪಕರು ಶೇರ್ ಮಾಡಿದ್ದು ಚಿತ್ರದ ಪ್ರಮುಖ ಪಾತ್ರದಲ್ಲಿ ಓರ್ವ ತೃತೀಯ ಲಿಂಗಿ ಕಾಣಿಸಿಕೊಂಡಿದ್ದಾರೆ.
ಲವ್ ಸೆಕ್ಸ್ ಔರ್ ದೋಖಾ 2 ಚಿತ್ರದಲ್ಲಿ ಬೋನಿತಾ ರಾಜ್ಪುರೋಹಿತ್ ಎನ್ನುವ ತೃತೀಯಲಿಂಗಿಗೆ ಅವಕಾಶ ನೀಡಲಾಗಿದೆ. ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಇದು ಮಹತ್ವದ ಸಂಗತಿಯಾಗಿದೆ.
2010ರಲ್ಲಿ ಬಿಡುಗಡೆ ಆಗಿದ್ದ ‘ಲವ್ ಸೆ*ಕ್ಸ್ ಔರ್ ದೋಖಾ’ ಸಿನಿಮಾದಲ್ಲೂ ನಿರ್ಮಾಪಕಿ ಏಕ್ತಾ ಕಪೂರ್ ಅನೇಕ ಹೊಸಬರಿಗೆ ಅವಕಾಶ ನೀಡಿದ್ದರು. ಇದೀಗ ಪಾರ್ಟ್ 2 ನಲ್ಲಿ ಬೋನಿತಾ ರಾಜ್ಪುರೋಹಿತ್ ಅವರಿಗೆ ಅವಕಾಶ ನೀಡಲಾಗಿದೆ. ತೃತೀಯಲಿಂಗಿಯನ್ನು ಮುಖ್ಯ ಪಾತ್ರದಲ್ಲಿ ಲಾಂಚ್ ಮಾಡುತ್ತಿರುವ ಮೊದಲ ನಿರ್ಮಾಪಕಿ ಎಂಬ ಖ್ಯಾತಿಗೆ ಏಕ್ತಾ ಕಪೂರ್ ಪಾತ್ರರಾಗುತ್ತಿದ್ದಾರೆ.
‘ಲವ್ ಸೆ*ಕ್ಸ್ ಔರ್ ದೋಖಾ 2’ ಸಿನಿಮಾದಲ್ಲಿ ಬೋನಿತಾ ರಾಜ್ಪುರೋಹಿತ್ ಅವರು ಕುಲು ಎಂಬ ಪಾತ್ರ ಮಾಡುತ್ತಿದ್ದಾರೆ. ಅವರಿಗೆ ಅವಕಾಶ ಹೇಗೆ ಸಿಕ್ಕಿತು ಎಂಬುದನ್ನು ವಿವರಿಸುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ನಿರ್ದೇಶಕ ದಿಬಾಕರ್ ಬ್ಯಾನರ್ಜಿ ಅವರು ಬೋನಿತಾಗೆ ತರಬೇತಿ ನೀಡಿದ್ದಾರೆ. ಈವರೆಗೂ ಸಿನಿಮಾ ಮತ್ತು ಕಿರುತೆರೆ ಮೂಲಕ 250ಕ್ಕೂ ಅಧಿಕ ಹೊಸ ಕಲಾವಿದರನ್ನು ಏಕ್ತಾ ಕಪೂರ್ ಲಾಂಚ್ ಮಾಡಿದ್ದಾರೆ. ಈಗ ತೃತೀಯಲಿಂಗಿಗೆ ಅವಕಾಶ ನೀಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
‘ನನ್ನ ಬಗ್ಗೆ ನಾನು ತಿಳಿದುಕೊಂಡಿದ್ದೇ ಸಿನಿಮಾಗಳ ಮೂಲಕ. ನನ್ನ ರೀತಿಯ ವ್ಯಕ್ತಿಗಳನ್ನು ಸಿನಿಮಾದಲ್ಲಿ ನೋಡಿದಾಗ ನನ್ನ ಕಥೆ ಕೂಡ ಮುಖ್ಯ ಎನಿಸಿತು. ನನ್ನ ರೀತಿಯ ಮಹಿಳೆಯನ್ನು ತೆರೆಮೇಲೆ ನೋಡಿ ನನಗೆ ಸ್ಫೂರ್ತಿ ಬಂತು. ಚಿಕ್ಕ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ ನನ್ನ ಸಂಬಳ 10ರಿಂದ 15 ಸಾವಿರ ರೂಪಾಯಿ ಇತ್ತು. ಜೀವನ ಸಾಗಿಸುವುದು ಕಷ್ಟ ಆಗಿತ್ತು. ನಟನೆಯ ಅವಕಾಶ ಸಿಗುತ್ತದೆ ಎಂದು ನಾನು ಕನಸಿನಲ್ಲಿಯೂ ಊಹಿಸಿರಲಿಲ್ಲ. ಆದರೆ ಈಗ ನನಗೆ ಬಾಲಿವುಡ್ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡುವ ಅವಕಾಶ ಸಿಕ್ಕಿದೆ’ ಎಂದು ಬೋನಿತಾ ರಾಜ್ಪುರೋಹಿತ್ ಹೇಳಿದ್ದಾರೆ.