ಇಸ್ಲಾಮಾಬಾದ್: ಜೂನ್ ತಿಂಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್ (T20 World Cup 2024) ಟೂರ್ನಿಗಾಗಿ ಪಾಕ್ ಕ್ರಿಕೆಟ್ ತಂಡ (Pakistan Cricket Team) ಈಗಿನಿಂದಲೇ ಭರ್ಜರಿ ತಯಾರಿ ಶುರು ಮಾಡಿದೆ. ಈ ಬಾರಿ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಪಾಕ್ ತಂಡಕ್ಕೆ ಸೇನೆಯಿಂದ ಕಠಿಣ ತರಬೇತಿ ಕೊಡಿಸಲಾಗುತ್ತಿದೆ. ಕ್ರಿಕೆಟ್ ಆಟಗಾರರಿಗೆ ಗನ್ ತರಬೇತಿ (Gun Training) ನೀಡಲಾಗುತ್ತಿದೆ.
ಪಾಕಿಸ್ತಾನ ಕ್ರಿಕೆಟಿಗರು ವಿಶ್ವಕಪ್ ಟೂರ್ನಿಗಾಗಿ ಸ್ನೈಪರ್ ಶೂಟಿಂಗ್, ಭಾರವಾದ ಕಲ್ಲು ಹೊತ್ತು ನಡೆಯುವುದು, ಸೈನಿಕರನ್ನ ಬೆನ್ನ ಮೇಲೆ ಹೊತ್ತುಕೊಂಡು ಮುಂದೆ ಸಾಗುವ ಅಭ್ಯಾಸಗಳನ್ನ ಮಾಡುತ್ತಿದ್ದಾರೆ. ಈ ಕುರಿತ ವೀಡಿಯೋ ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಟೀಂ ಇಂಡಿಯಾ ಕ್ರಿಕೆಟ್ ಫ್ಯಾನ್ಸ್ (Team India Cricket Fans) ಪಾಕ್ ಕ್ರಿಕೆಟಿಗರನ್ನ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಅಲ್ಲದೇ ನೆಟ್ಟಿಗರು ಇದೆಲ್ಲಾ ಬೇಕಿತ್ತಾ? ಅನಗತ್ಯ ತರಬೇತಿ ನೀಡಿ ಆಟಗಾರರ ಸಮಯವನ್ನೂ ವ್ಯರ್ಥಮಾಡಿಕೊಳ್ಳುತ್ತಿದೆ ಎಂದು ಕಿಡಿ ಕಾರಿದ್ದಾರೆ.
Not sure of the source of this video, but here's an attempt on Saim Ayub's back being broken #Cricket pic.twitter.com/qKb8k6a8fM
— Saj Sadiq (@SajSadiqCricket) April 4, 2024
ಟಿ20 ವಿಶ್ವಕಪ್ಗೆ ಮುಂಚಿತವಾಗಿ ರಾಷ್ಟ್ರೀಯ ಕ್ರಿಕೆಟಿಗರು ಗಾಯಗೊಳ್ಳಬಾರದು ಎಂಬ ಉದ್ದೇಶದಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಸೇನೆಯ ಮೂಲಕ ಅವರಿಗೆ ತರಬೇತಿ ನೀಡುತ್ತಿದೆ. ಆದ್ರೆ ಪಾಕ್ ಸೇನೆಯು ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿರುವ ಕ್ರಿಕೆಟಿಗರು ಸಂಬಂಧವಿಲ್ಲದ ಫಿಟ್ನೆಸ್ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಆಟಗಾರರು ಸೈನಿಕರಿಗಿಂತ ಭಿನ್ನ.
ಆದರೆ ಪಾಕಿಸ್ತಾನ ಕ್ರಿಕೆಟ್ ಆಡಳಿತ ಮಂಡಳಿ ಇಂತಹ ಸಾಮಾನ್ಯ ಜ್ಞಾನವನ್ನೂ ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿದೆ. ಆಟಗಾರರಿಗೆ ಅಸಾಧಾರಣ ಸವಾಲು ನೀಡಿದೆ ಎಂದು ದೂರಿದ್ದಾರೆ. ಸೈನಿಕರಿಗೆ ಕೊಡುವ ತರಬೇತಿಯನ್ನು ಆಟಗಾರರಿಗೆ ಕೊಟ್ಟರೆ ಅವರು ಗಾಯಗೊಳ್ಳುವುದರಲ್ಲಿ ಯಾವುದೇ ಸಂದೇಹ ಇಲ್ಲ. ಹೀಗಾಗಿ ಅವರಿಗೆ ಬೇರೆ ರೀತಿಯ ತರಬೇತಿ ನೀಡಬೇಕು ಎಂಬುದಾಗಿ ಕ್ರಿಕೆಟ್ ಅಭಿಮಾನಿಗಳು ಒತ್ತಾಯಿಸಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿ ಎಲ್ಲಿ–ಯಾವಾಗ?
2024ರ ಟಿ20 ವಿಶ್ವಕಪ್ ಟೂರ್ನಿಯು ವೆಸ್ಟ್ ಇಂಡೀಸ್ (West Indies) ಮತ್ತು ಅಮೆರಿಕದ (USA) ಆತಿಥ್ಯದಲ್ಲಿ ಜೂನ್ 1 ರಿಂದ ಜೂನ್ 29ರ ವರೆಗೆ ನಡೆಯಲಿದೆ. ಈ ಬಾರಿ 16 ರಿಂದ 20ಕ್ಕೆ ತಂಡಗಳ ಸಂಖ್ಯೆಯನ್ನು ಹೆಚ್ಚಿಸಿದ್ದು, ಒಟ್ಟು 4 ಗುಂಪುಗಳಲ್ಲಿ 20 ತಂಡಗಳು ಕಣಕ್ಕಿಳಿಯಲಿವೆ. ಅಲ್ಲದೇ ಸೂಪರ್-12 ಹಂತವನ್ನು ಸೂಪರ್-8ಗೆ ಇಳಿಸಲಾಗಿದೆ. ಸೂಪರ್-8 ಗುಂಪಿನಲ್ಲಿ ಅಗ್ರಸ್ಥಾನ ಪಡೆದ 4 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.
ಜೂನ್ 1 ರಿಂದ 18ರ ವರೆಗೆ ಗುಂಪು ಹಂತದ ಪಂದ್ಯಗಳು ನಡೆಯಲಿದೆ. ಜೂನ್ 19 ರಿಂದ 24ರ ವರೆಗೆ ಸೂಪರ್-8 ಪಂದ್ಯಗಳು, ಜೂನ್ 26 ಮತ್ತು ಜೂನ್ 27 ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಜೂನ್ 29ರಂದು ಬಾರ್ಬಡೋಸ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ.