ಕಳೆದ ಎರಡು ಮೂರು ದಿನಗಳ ಹಿಂದಷ್ಟೇ ‘ರಾಮಾಯಣ’ ಸಿನಿಮಾದ ಚಿತ್ರೀಕರಣ ಶುರುವಾಗಿದೆ. ಶೂಟಿಂಗ್ ಶುರುವಾದ ಮೊದಲನೇ ದಿನವೇ ಶೂಟಿಂಗ್ ಸೆಟ್ ನಿಂದ ಫೋಟೋ ಲೀಕ್ ಆಗಿತ್ತು. ಎರಡನೇ ದಿನ ನಟ ಅರುಣ್ ಗೋವಿಲ್ ಮತ್ತು ನಟಿ ಲಾರಾ ದತ್ತ ಹಾಗೂ ಮತ್ತಿತರರು ಶೂಟಿಂಗ್ ನಲ್ಲಿ ಭಾಗಿಯಾದ ಫೋಟೋಗಳು ಲೀಕ್ ಆಗಿವೆ. ಹಾಗಾಗಿ ಚಿತ್ರೀಕರಣ ಸ್ಥಳದಲ್ಲಿ ಮೊಬೈಲ್ ನಿಷೇಧಿಸಿದೆಯಂತೆ ಚಿತ್ರತಂಡ.
ರಾಮಾಯಣ ಸಿನಿಮಾ ಆರಂಭಕ್ಕೂ ಮುನ್ನವೇ ಸಾಕಷ್ಟು ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ. ಮೊನ್ನೆಯಿಂದ ಚಿತ್ರೀಕರಣವನ್ನು ಆರಂಭಿಸಿದ್ದಾರೆ ನಿರ್ದೇಶಕ ನಿತಿಶ್ ತೀವಾರಿ. ಈ ಹಂತದ ಚಿತ್ರೀಕರಣದಲ್ಲಿ ಸ್ಟಾರ್ ನಟರು ಭಾಗಿ ಆಗುತ್ತಿಲ್ಲ ಎನ್ನುವ ಮಾಹಿತಿ ಇದೆ. ಗುರುಕುಲ ದೃಶ್ಯದಿಂದ ಚಿತ್ರೀಕರಣ ಆರಂಭಿಸಿದ್ದಾರೆ. ನಂತರದ ಚಿತ್ರೀಕರಣದಲ್ಲಿ ಸ್ಟಾರ್ ತಾರಾಗಣವೇ ಇರಲಿದೆ.
ಈ ನಡುವೆ ರಾಮಾಯಣ ಸಿನಿಮಾದ ಬಗ್ಗೆ ದಿನಕ್ಕೊಂದು ಮಾಹಿತಿ ಹೊರ ಬೀಳುತ್ತಿದೆ. ಮಂಡೋದರಿ ಪಾತ್ರವನ್ನು ಹಿಂದಿಯ ಖ್ಯಾತ ಕಿರುತೆರೆ ನಟಿ ಸಾಕ್ಷಿ ತನ್ವರ್ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಈ ಸುದ್ದಿ ಸಾಕಷ್ಟು ಸದ್ದು ಕೂಡ ಮಾಡಿತ್ತು. ಈ ವಿಷಯ ಸ್ವತಃ ಸಾಕ್ಷಿಗೂ ತಲುಪಿತ್ತು. ಈ ಕುರಿತಂತೆ ಅವರು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ರಾಮಾಯಣ ಕುರಿತಂತೆ ಸಿನಿಮಾ ಆಗುತ್ತಿರುವ ವಿಷಯವನ್ನು ನಾನೂ ಬಲ್ಲೆ. ಆದರೆ, ಮಂಡೋದರಿ ಪಾತ್ರಕ್ಕೆ ನನ್ನ ಹೆಸರು ಬಳಕೆ ಆಗಿದ್ದು ನಾನೂ ಕೇಳಿದ್ದೇನೆ. ಆದರೆ, ಈವರೆಗೂ ಚಿತ್ರತಂಡವಾಗಲಿ, ನಿರ್ದೇಶಕರಾಗಲಿ ಯಾರೂ ನನ್ನನ್ನು ಸಂಪರ್ಕಿಸಿಲ್ಲ ಎದು ಸಾಕ್ಷಿ ಹೇಳಿದ್ದಾರೆ.
ತಮಿಳಿನ ಹೆಸರಾಂತ ನಟ ವಿಜಯ್ ಸೇತುಪತಿ ಕೂಡ ಈ ಸಿನಿಮಾದಲ್ಲಿ ರಾವಣನ ಸಹೋದರನಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ರಾವಣನ ಸಹೋದರನಾಗಿ ವಿಜಯ್ ಸೇತುಪತಿ ನಟಿಸಿದರೆ, ಈ ಹಿಂದೆ ರಾವಣನಾಗಿ ಕನ್ನಡದ ನಟ ಯಶ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ದೊಡ್ಡ ಸುದ್ದಿ ಆಗಿತ್ತು. ಸಾಕಷ್ಟು ಬಾರಿ ಈ ವಿಚಾರ ಮುನ್ನೆಲೆಗೆ ಬಂದರೂ, ಯಶ್ ಮಾತ್ರ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.