ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ 17ನೇ ಆವೃತ್ತಿಯ ಐಪಿಎಲ್ನ 19 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶುಕ್ರವಾರ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ
IPL ಸೀಸನ್ 17 ರ ಲೀಗ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಎಲ್ಲಾ 3 ಪಂದ್ಯಗಳನ್ನು ಗೆದ್ದು ತಂಡವು ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಆರ್ಸಿಬಿ 4 ಪಂದ್ಯಗಳಲ್ಲಿ 1 ರಲ್ಲಿ ಮಾತ್ರ ಗೆದ್ದಿದ್ದು, 3 ರಲ್ಲಿ ಸೋಲು ಕಂಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಮುಖಾಮುಖಿ ವರದಿಯನ್ನು ನಾವು ನೋಡುವುದಾದರೆ, ಇಲ್ಲಿಯವರೆಗೆ ಎರಡು ತಂಡಗಳ ನಡುವೆ ಕಠಿಣ ಪೈಪೋಟಿ ನಡೆದಿರುವುದನ್ನು ನಾವು ಕಾಣಬಹುದಾಗಿದೆ. ಎರಡೂ ತಂಡಗಳು ಐಪಿಎಲ್ನಲ್ಲಿ ಇದುವರೆಗೆ 30 ಬಾರಿ ಮುಖಾಮುಖಿಯಾಗಿವೆ.
ಈ 30 ಮುಖಾಮುಖಿಯಲ್ಲಿ ಆರ್ಸಿಬಿ 15 ಪಂದ್ಯಗಳನ್ನು ಗೆದ್ದಿದ್ದರೆ, ರಾಜಸ್ಥಾನ್ ರಾಯಲ್ಸ್ 12 ಪಂದ್ಯಗಳನ್ನು ಗೆದ್ದಿದೆ. 3 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಇದನ್ನು ಗಮನಿಸಿದರೆ, ಉಭಯರ ಮುಖಾಮುಖಿಯಲ್ಲಿ ಆರ್ಸಿಬಿ ಮೇಲುಗೈ ಸಾಧಿಸಿರುವುದನ್ನು ನಾವು ಕಾಣಬಹುದಾಗಿದೆ. ಹೀಗಾಗಿ ನಾಳಿನ ಪಂದ್ಯವನ್ನು ಗೆದ್ದು, ಆರ್ಸಿಬಿ ತನ್ನ ಲಯ ಕಂಡುಕೊಳ್ಳುತ್ತಾ ಎಂಬುದನ್ನು ಕಾದುನೋಡಬೇಕಿದೆ.
ಇನ್ನು ಉಭಯ ತಂಡಗಳ ಕಳೆದ 5 ಮುಖಾಮುಖಿಯ ಬಗ್ಗೆ ಮಾತನಾಡುವುದಾದರೆ, ಇದರಲ್ಲೂ ಆರ್ಸಿಬಿ ಮೇಲುಗೈ ಸಾಧಿಸಿದೆ. ಇದರಲ್ಲಿ ಆರ್ಸಿಬಿ 3 ಪಂದ್ಯಗಳನ್ನು ಗೆದ್ದಿದ್ದರೆ, ರಾಜಸ್ಥಾನ 2 ಪಂದ್ಯಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.