ಶಿವಮೊಗ್ಗ: ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಕರೆದಾಗ ಗೌರವಕೊಟ್ಟು ನಾನು ದೆಹಲಿಗೆ ಹೋಗಿದ್ದೆ. ಆದರೆ, ಅವರು ಭೇಟಿಯಾಗದೆ ಪರೋಕ್ಷವಾಗಿ ನನ್ನ ಸ್ಪರ್ಧೆಗೆ ಅಸ್ತು ಎಂದಿದ್ದಾರೆ. ನಾನು ಈ ಹಿಂದೆ ಹೇಳಿದಂತೆ ನನ್ನ ಸ್ಪರ್ಧೆ ನಿಶ್ಚಿತ ಎಂದು ಸ್ವತಂತ್ರ ಅಭ್ಯರ್ಥಿ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಮಿತ್ ಶಾ ಅವರು ಸೇರಿ ಪಕ್ಷದ ಹಿರಿಯರಿಗೆ ಗೌರವ ಕೊಡುವುದು ನನಗೆ ಕಲಿಸಿರುವ ಸಂಸ್ಕೃತಿ. ಹೀಗಾಗಿ ನಾನು ಹೋಗಿದ್ದೆ. ಆದರೆ ಅಲ್ಲಿ ಮಾತುಕತೆ ನಡೆಯಲಿಲ್ಲ. ಮತ್ತೆ ದೆಹಲಿಯಿಂದ ಕರೆ ಬಂದರೆ ಅವರಿಗೆ ಗೌರವ ಕೊಟ್ಟು ಹೋಗುತ್ತೇನೆ. ಆದರೆ, ಚುನಾವಣೆಯಿಂದ ಹಿಂದೆ ಸರಿಯಲ್ಲ. ಹೀಗಾಗಿ ನನ್ನ ಸ್ಪರ್ಧೆ ಕುರಿತು ಕಾರ್ಯಕರ್ತರು ಇನ್ನು ಯಾವ ಅನುಮಾನವನ್ನೂ ಇಟ್ಟುಕೊಳ್ಳುವುದು ಬೇಡ ಎಂದರು.
ಒಂದೇ ರೂಂನಲ್ಲಿ ಗಂಡ-ಹೆಂಡತಿ, ಸ್ನೇಹಿತೆಯ ನಿಗೂಢ ಸಾವು: ವಾಮಾಚಾರಕ್ಕೆ ಬಲಿಯಾದ್ರಾ..?
ದೆಹಲಿಯಲ್ಲಿ ಸಂಘಟನಾ ಕಾರ್ಯದರ್ಶಿ ರಾಜೇಶ್ ಜೀ ಮನೆಗೆ ಬರುವಂತೆ ತಮಗೆ ತಿಳಿಸಲಾಗಿತ್ತು. ಶಾ ಅವರ ಕಚೇರಿಯಿಂದ ಕರೆ ಬಂದ ಬಳಿಕ ಮನೆಗೆ ಕರೆಯುವುದಾಗಿ ತಿಳಿಸಲಾಯಿತು. ಕೆಲ ಹೊತ್ತಿನ ಬಳಿಕ ಅಮಿತ್ ಶಾ ಭೇಟಿಯಾಗುವುದಿಲ್ಲ ಎಂದು ಮಾಹಿತಿ ನೀಡಲಾಯಿತು. ಇದರರ್ಥ ಶಿವಮೊಗ್ಗಕ್ಕೆ ವಾಪಸ್ ಹೋಗು, ಹೋಗಿ ನೀನು ಸ್ಪರ್ಧಿಸಿ ಗೆಲ್ಲು ಎಂಬ ಸಂದೇಶ ಕೊಟ್ಟಿದ್ದಾರೆ ಎಂದು ತಿಳಿಸಿದರು.