ಹಾವೇರಿ: ರಾಜ್ಯ ಸರ್ಕಾರ ತನ್ನ ಖಜಾನೆಯಿಂದ ಬರ ಪರಿಹಾರ ಬಿಡುಗಡೆ ಮಾಡಿ ತನ್ನ ಗಂಡಸ್ತನ ತೋರಿಸಲಿ, ನಾವು ಅಧಿಕಾರದಲ್ಲಿದ್ದಾಗ ಪ್ರವಾಹಕ್ಕೆ ಎರಡು ಪಟ್ಟು ಪರಿಹಾರ ನೀಡಿ ನಮ್ಮ ಗಂಡಸ್ತನ ತೋರಿಸಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Basanagowda Patil Yatnal: ಈಶ್ವರಪ್ಪ ಬಗ್ಗೆ ಯತ್ನಾಳ್ ಸ್ಪೋಟಕ ಹೇಳಿಕೆ!
ಹಾನಗಲ್ ತಾಲೂಕು ಆಡೂರು ಗ್ರಾಮದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮುಂದೆ ಬರಗಾಲದ ಬಗ್ಗೆ ಮಾತನಾಡಲು ಒಬ್ಬೇ ಒಬ್ಬ ಬಿಜೆಪಿ ನಾಯಕರು ಗಂಡಸರಾಗಿ ನಿಂತಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ನೋಡಿ, ಈಗ ಸದ್ಯ ಗಂಡಸ್ಥನ ಟೆಸ್ಟ್ ಆಗೋದು ಯಾರು ಅಧಿಕಾರದಲ್ಲಿದ್ದಾರೆ ಅವರದ್ದು, ಸಿದ್ದರಾಮಯ್ಯರನ್ನು ಜನ ಅಧಿಕಾರಕ್ಕೆ ತಂದಿದ್ದಾರೆ.
ಅಧಿಕಾರಕ್ಕೆ ತಂದ ಮಾಲೀಕರು ಕಷ್ಟದಲ್ಲಿದ್ದಾರೆ. ಅವರ ಕಷ್ಟಕ್ಕೆ ಧಾವಿಸುವುದು ಅವರ ಕೆಲಸ. ನಮ್ಮ ಅವಧಿಯಲ್ಲಿ ಪ್ರವಾಹ ಬಂದಾಗ ಯಾರಿಗೂ ಕಾಯದೇ ಪ್ರವಾಹ ಪರಿಹಾರ ಎರಡು ಪಟ್ಟು ಬಿಡುಗಡೆ ಮಾಡಿದ್ದೇವೆ. 17 ಲಕ್ಷ ಜನರಿಗೆ ಪರಿಹಾರ ಕೊಟ್ಟಿರುವುದು ನಮ್ಮ ಗಂಡಸ್ಥನ. ನಮ್ಮ ಗಂಡಸ್ತನ ನಾವು ಈಗಾಗಲೇ ತೋರಿಸಿದ್ದೇವೆ ಎಂದು ತಿರುಗೇಟು ನೀಡಿದರು.
ನಾವೇನು ಯಾರ ಮೇಲೂ ಬೊಟ್ಟು ಮಾಡಿ ತೋರಿಸಿಲ್ಲ
ನಿಜವಾದ ಗಂಡಸ್ಥನದ ಪರೀಕ್ಷೆ ಈಗ ಇವರದಿದೆ. ಇವರು ಕೇಂದ್ರದ ಮೇಲೆ ಬೊಟ್ಟು ಮಾಡಿ ತೋರಿಸದೇ ತಮ್ಮ ಖಜಾನೆಯಿಂದ ದುಡ್ಡು ಬಿಡುಗಡೆ ಮಾಡಿ ತೋರಿಸಲಿ ಎಂದು ಹೇಳಿದರು.
ನಮಗೇನು ಆಗ ಮೇಲಿಂದ ಪರಿಹಾರ ಬಂದಿತ್ತಾ? ಆ ಮೇಲೆ ಬಂತು. ಈಗ ರೈತರಿಗೆ ಪರಿಹಾರ ಕೊಡಲು ಖಜಾನೆ ಖಾಲಿಯಾಗಿದೆ. ತಮ್ಮ ವೈಫಲ್ಯ ಮುಚ್ಚಿ ಹಾಕಲು ಕುಂಟು ನೆಪ ಹೇಳುತ್ತಾರೆ. ವೈಫಲ್ಯ ಮುಚ್ಚಿಕೊಳ್ಳಲು ಗಂಡಸ್ಥನದ ಮಾತು ಹೇಳುತ್ತಿದ್ದಾರೆ. ನಾವು ಅಧಿಕಾರದಲ್ಲಿದ್ದಾಗ ನಿಜವಾದ ಗಂಡಸ್ಥನ ನಾವು ತೋರಿಸಿದ್ದೇವೆ. ಅವರು ಈಗ ಅಧಿಕಾರದಲ್ಲಿದ್ದಾರೆ, ಅವರು ಪರಿಹಾರ ನೀಡುವುದರಲ್ಲಿ ಗಂಡಸ್ಥನ ತೋರಿಸಲಿ ಎಂದು ಸವಾಲು ಹಾಕಿದರು.
ರಾಮರಾಜ್ಯ ಮಾಡುತ್ತೇವೆ
ರಾಮ ಮಂದಿರ ತೋರಿಸಿ ಬಿಜೆಪಿ ಮತ ಯಾಚನೆ ಮಾಡುತ್ತಿದ್ದಾರೆಂಬ ಕಾಂಗ್ರೆಸ್ಸಿಗರ ಹೇಳಿಕೆ ಪ್ರತಿಕ್ರಿಯಿಸಿದ ಅವರು, ನಾವು ರಾಮನ ಹೆಸರೂ ಹೇಳುತ್ತೇವೆ, ರಾಮ ರಾಜ್ಯವನ್ನೂ ಮಾಡಿದ್ದೇವೆ. ಕರ್ನಾಟಕದಲ್ಲಿ ಕೊಡುತ್ತಿರುವುದು ನರೇಂದ್ರ ಮೋದಿ ಕೊಟ್ಟಿರುವ ಅಕ್ಕಿ. ಅನ್ನ ಕೊಟ್ಟಿರುವುದು ನರೇಂದ್ರ ಮೋದಿಯವರು. ಸಿದ್ದರಾಮಯ್ಯ ಒಂದು ಬಿಡಿಗಾಳನ್ನೂ ಕೊಟ್ಟಿಲ್ಲ. ಅನ್ನದ ಬಗ್ಗೆ ಮಾತನಾಡಲು
ಇವರಿಗೆ ಯಾವ ನೈತಿಕ ಹಕ್ಕಿದೆ ಎಂದು ಪ್ರಶ್ನಿಸಿದರು.
ಈಶ್ವರಪ್ಪ ಹೇಳಿಕೆಯಲ್ಲಿ ಹುರುಳಿಲ್ಲ
ಶಿವಮೊಗ್ಗದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೊಂದಾಣಿಕೆ ರಾಜಕೀಯ ಮಾಡ್ತಿದ್ದಾರೆ ಎಂಬ ಈಶ್ವರಪ್ಪ ಹೇಳಿಕೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಸಂದರ್ಭದಲ್ಲಿ ಈ ತರದ ಹೇಳಿಕೆಗಳು ಸಹಜ. ಅಂತಿಮ ತೀರ್ಪು ಜನ ಕೊಡುತ್ತಾರೆ. ಆದ್ದರಿಂದ ಯಾರೂ ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳುವುದು ಸಾಧ್ಯವಿಲ್ಲ
ಜನ ಎಲ್ಲಾ ಗಮನಿಸುತ್ತಾರೆ. ಈಶ್ವರಪ್ಪ ಅವರು ಅವರ ಅನುಕೂಲಕ್ಕೆ ತಕ್ಕಂತೆ ಅವರು ವಾದ ಮಾಡುತ್ತಾರೆ. ಈಶ್ವರಪ್ಪ ಅವರ ಹೇಳಿಕೆಯಲ್ಲಿ ಹುರುಳಿಲ್ಲ ಎಂದು ಹೇಳಿದರು.
ಎಸ್ಡಿಪಿಐ ಕಾಂಗ್ರೆಸ್ ಮರಿ
ಕೇರಳದಲ್ಲಿ ಕಾಂಗ್ರೆಸ್ ಜೊತೆ ಎಸ್ ಡಿ ಪಿ ಐ ಹೊಂದಾಣಿಕೆ ಮಾಡಿಕೊಂಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಎಸ್ ಡಿ ಪಿ ಐ ಕಾಂಗ್ರೆಸ್ ಹುಟ್ಟು ಹಾಕಿರುವ ಒಂದು ಮರಿ. ಹೀಗಾಗಿ ಅದರ ಪಾಲನೆ ಪೋಷಣೆ ಕಾಂಗ್ರೆಸ್ ನವರು ಮಾಡುತ್ತಿದ್ದಾರೆ. ಅದಕ್ಕೆ ಅವರು ಅವರ ಜೊತೆಗೇ ಇರುತ್ತಾರೆ ಎಂದು ಹೇಳಿದರು.