IPL ಸೀಸನ್ 17 ರಲ್ಲಿ KKR ತಂಡ ಆಡಿದ ಮೂರಕ್ಕೆ ಮೂರೂ ಪಂದ್ಯಗಳನ್ನು ಗೆದ್ದು ಬೀಗಿದೆ. ಈ ಮೂರು ಪಂದ್ಯಗಳಲ್ಲೂ ತಂಡ ಆಲ್ರೌಂಡರ್ ಪ್ರದರ್ಶನ ನೀಡುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿದೆ. ಇದು ತಂಡದ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ.
IPL 2024: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ, ಗುಜರಾತ್ ಬ್ಯಾಟಿಂಗ್!
ಪ್ರಸ್ತುತ ಕೆಕೆಆರ್ ಇಡೀ ತಂಡವಾಗಿ ಪ್ರದರ್ಶನವನ್ನು ನೀಡುತ್ತಿರುವುದನ್ನು ನೋಡಿದರೆ ಈ ಸಲ ಕಪ್ ಶಾರೂಖ್ ತಂಡಕ್ಕೆ ಎಂದರೆ ತಪ್ಪಾಗಲಾರದು. ಈ ನಡುವೆ ಹೀಗೊಂದು ಕಾಕತಾಳಿಯ ಹುಟ್ಟಿಕೊಂಡಿದ್ದು, ಈ ಬಾರಿ ಕೆಕೆಆರ್ ಚಾಂಪಿಯನ್ ಆಗುವುದು ಖಚಿತ ಎಂದು ಹೇಳಲಾಗುತ್ತಿದೆ.
ವಾಸ್ತವವಾಗಿ ಈ ಕಾಕತಾಳೀಯ ತಂಡದ ಮೆಂಟರ್ ಗೌತಮ್ ಗಂಭೀರ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅವರಿಗೆ ಸಂಬಂಧಿಸಿದ್ದಾಗಿದೆ. ಈ ಕಾಕತಾಳೀಯವನ್ನು ನೋಡಿದರೆ, ಕೆಕೆಆರ್ ಮೂರನೇ ಬಾರಿ ಟ್ರೋಫಿ ಎತ್ತಿ ಹಿಡಿಯಬಹುದು ಎನಿಸುತ್ತಿದೆ. ಹಾಗಾದರೆ ಈ ವಿಶೇಷ ಕಾಕತಾಳೀಯ ಏನು ಎಂಬುದನ್ನು ನೋಡುವುದಾದರೆ…
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಇದುವರೆಗೆ ಎರಡು ಬಾರಿ (2012, 2014) ಐಪಿಎಲ್ ಪ್ರಶಸ್ತಿ ಗೆದ್ದಿದೆ. ಗೌತಮ್ ಗಂಭೀರ್ ನಾಯಕತ್ವದಲ್ಲಿ ಈ ತಂಡ ಎರಡೂ ಬಾರಿ ಈ ಸಾಧನೆ ಮಾಡಿದೆ. 2012ರಲ್ಲಿ ಕೆಕೆಆರ್ನ ಜವಾಬ್ದಾರಿ ವಹಿಸುವ ಮೊದಲು ಗಂಭೀರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದರು.
2010ರಲ್ಲಿ ಡೆಲ್ಲಿ ತಂಡ ಪ್ಲೇ-ಆಫ್ಗೆ ಅರ್ಹತೆ ಪಡೆಯಲು ಸಾಧ್ಯವಾಗದಿದ್ದರಿಂದ ತಂಡದ ಕಳಪೆ ಪ್ರದರ್ಶನಕ್ಕೆ ಗಂಭೀರ್ ಅವರನ್ನು ಹೊಣೆ ಮಾಡಿ ತಂಡದಿಂದ ಬಿಡುಗಡೆ ಮಾಡಲಾಯಿತು. ಆ ನಂತರ 2011 ರ ಮೆಗಾ ಹರಾಜಿನಲ್ಲಿ ಕೋಲ್ಕತ್ತಾ 14.9 ಕೋಟಿಗೆ ಬಿಡ್ ಮಾಡಿ ( ಆ ಸೀಸನ್ನ್ನ ಅತ್ಯಂತ ದುಬಾರಿ ಆಟಗಾರ) ಗಂಭೀರ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು.
ಇದಾದ ಬೆನ್ನಲ್ಲೇ ಗಂಭೀರ್ ಅವರನ್ನು ತಂಡದ ನಾಯಕರನ್ನಾಗಿಯೂ ನೇಮಿಸಲಾಯಿತು. ಆ ಬಳಿಕ ಕೆಕೆಆರ್ ಪರ ಸತತ ಎರಡನೇ ಸೀಸನ್ ಆಡಿದ ಗಂಭೀರ್ ಕೆಕೆಆರ್ ತಂಡವನ್ನು ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸಿದ್ದರು.
ಗೌತಮ್ ಗಂಭೀರ್ ಅವರಂತೆ ಶ್ರೇಯಸ್ ಅಯ್ಯರ್ ಕೂಡ ಕೋಲ್ಕತ್ತಾ ಪರ ಆಡುವುದಕ್ಕೂ ಮೊದಲು ಡೆಲ್ಲಿ ಪರ ಆಡಿದ್ದರು. 2018ರಲ್ಲಿ ಗಂಭೀರ್ ದೆಹಲಿ ತಂಡದ ನಾಯಕತ್ವ ತೊರೆದಾಗ ಅಯ್ಯರ್ ಅವರನ್ನು ಡೆಲ್ಲಿ ತಂಡದ ನಾಯಕರನ್ನಾಗಿ ನೇಮಿಸಲಾಗಿತ್ತು. ನಂತರ ಅಯ್ಯರ್ 2021 ರವರೆಗೆ ಡೆಲ್ಲಿ ಪರ ಆಡುವುದನ್ನು ಮುಂದುವರೆಸಿದ್ದರು.
ಆ ನಂತರ ಅಯ್ಯರ್ ನಾಯಕತ್ವದಲ್ಲೂ ಡೆಲ್ಲಿ ತಂಡದ ಪ್ರದರ್ಶನ ಉತ್ತಮಗೊಳಲಿಲ್ಲ. ಹೀಗಾಗಿ ಡೆಲ್ಲಿ 2022 ರಲ್ಲಿ ಅಯ್ಯರ್ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು. ಇದರ ನಂತರ ಗಂಭೀರ್ ಅವರಂತೆ, ಅಯ್ಯರ್ ಕೂಡ ಮೆಗಾ ಹರಾಜಿನಲ್ಲಿ 12.25 ಕೋಟಿಗೆ ಕೆಕೆಆರ್ ತಂಡವನ್ನು ಸೇರಿಕೊಂಡರು.
ಶ್ರೇಯಸ್ ಅಯ್ಯರ್ ಈಗ ಕೋಲ್ಕತ್ತಾ ಪರ ಎರಡನೇ ಸೀಸನ್ ಆಡುತ್ತಿದ್ದಾರೆ. ಏಕೆಂದರೆ 2023 ರಲ್ಲಿ ಅವರು ಗಾಯದ ಕಾರಣದಿಂದಾಗಿ ಇಡೀ ಸೀಸನ್ ಹೊರಗುಳಿದಿದ್ದರು. ಇದೀಗ ಕೆಕೆಆರ್ ಪರ ಎರಡನೇ ಸೀಸನ್ ಆಡುತ್ತಿರುವ ಅಯ್ಯರ್ ನಾಯಕತ್ವದಲ್ಲಿ ಕೆಕೆಆರ್ ತಂಡ ಇದುವರೆಗೆ ತೋರಿದ ಆಟವನ್ನು ನೋಡಿದರೆ ಐಪಿಎಲ್ ಪ್ರಶಸ್ತಿಗೆ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗುತ್ತಿದೆ.