ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪದಾರ್ಪಣೆ ಪಂದ್ಯದಲ್ಲಿಯೇ ಮೂರು ವಿಕೆಟ್ಗಳನ್ನು ಕಬಳಿಸಿ ಎಲ್ಲರ ಗಮನ ಸೆಳೆದಿದ್ದ ಲಖನೌ ಸೂಪರ್ ಜಯಂಟ್ಸ್ ತಂಡದ ಯುವ ವೇಗಿ ಮಯಾಂಕ್ ಯಾದವ್ ಅವರನ್ನು ಇಂಗ್ಲೆಂಡ್ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್ ಮುಕ್ತಕಂಠದಿಂದ ಗುಣಗಾಣ ಮಾಡಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಪ್ರೆಸ್ ಬಾಕ್ಸ್ನಲ್ಲಿ ಮಾತನಾಡಿದ ಸ್ಟುವರ್ಟ್ ಬ್ರಾಡ್, “ಯುವ ಬೌಲರ್ನಿಂದ ನಾನು ನೋಡಿದ ಅತ್ಯಂತ ಅದ್ಭುತವಾದ ಚೊಚ್ಚಲ ಪಂದ್ಯಗಳಲ್ಲಿ ಇದು ಒಂದಾಗಿದೆ. ಮೈದಾನಕ್ಕೆ ಬಂದು ತಮ್ಮ ಪಂದ್ಯದ ದಿಕ್ಕನ್ನು ಬದಲಿಸಿದರು. ಅತ್ಯುತ್ತಮ ರನ್ ಅಪ್ನೊಂದಿಗೆ ತಮ್ಮ ಬೌಲಿಂಗ್ನಲ್ಲಿ ಶಾಂತವಾಗಿದ್ದಾರೆ. 156 ಕಿ.ಮೀ ವೇಗದಲ್ಲಿ ಬೌಲ್ ಮಾಡಿದ್ದು ನನ್ನ ಗಮನವನ್ನು ಸೆಳೆಯಿತು. ಇವರ ಲೈನ್ ನಿಜಕ್ಕೂ ಅಸಾಧಾರಣವಾಗಿತ್ತು. ವೇಗದಲ್ಲಿ ಇವರು ಅಂತಾರಾಷ್ಟ್ರೀಯ ಗುಣಮಟ್ಟವನ್ನು ಹೊಂದಿದ್ದಾರೆ. ಯುವ ಪ್ರತಿಭಾವಂತ ಬೌಲರ್ಗೆ ಇರಬೇಕಾದ ಎಲ್ಲಾ ಲಕ್ಷಣಗಳು ಇವರಲ್ಲಿದೆ. ಅವರು ಕೇವಲ ಒಂದು ಪಂದ್ಯ ಮಾತ್ರವಲ್ಲ, ಎಲ್ಎಸ್ಜಿ ತಂಡಕ್ಕೆ ಎಲ್ಲಾ ಪಂದ್ಯಗಳನ್ನು ಗೆದ್ದುಕೊಡಬಲ್ಲರು,” ಎಂದು ಹೇಳಿದ್ದಾರೆ.
“ಮಯಾಂಕ್ ಯಾದವ್ ಅವರನ್ನು ನೋಡುವುದು ಉತ್ಸುಕತೆಯಿಂದ ಕೂಡಿದೆ. ಆದರೆ, ಅವರು ಈಗಾಗಲೇ ಗಾಯದ ಸಮಸ್ಯೆಯನ್ನು ಕಳೆದ ಎರಡು ಆವೃತ್ತಿಗಳಲ್ಲಿ ಎದುರಿಸಿದ್ದಾರೆ. ಮಾರ್ನೆ ಮಾರ್ಕೆಲ್ ಅವರಂಥ ಮೆಂಟರ್ ಅನ್ನು ಅವರು ಪಡೆದಿದ್ದಾರೆ. ಈ ಐಪಿಎಲ್ ಪೂರ್ತಿ ಅವರು ಯುವ ವೇಗಿಯನ್ನು ತಿದ್ದಲಿದ್ದಾರೆ. ಅವರ ಬೌಲಿಂಗ್ ಅನ್ನು ನೋಡಲು ಉತ್ಸುಕವಾಗಿದೆ ಎಂದು ಹೇಳಿದ್ದಾರೆ.