ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ 2024ರ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಪಂಜಾಬ್ ಕಿಂಗ್ಸ್ ಅನ್ನು 21 ರನ್ಗಳಿಂದ ಸೋಲಿಸಿತು. ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಈ ದಾಖಲೆ ನಿರ್ಮಿಸಿರುವುದು 21 ವರ್ಷದ ಯುವ ವೇಗಿ ಮಯಾಂಕ್ ಯಾದವ್ (Mayank Yadav). ಲಕ್ನೋ ಸೂಪರ್ ಜೈಂಟ್ಸ್ ಪರ ಪಾದಾರ್ಪಣೆ ಮಾಡಿರುವ ಮಾಯಾಂಕ್ ಚೊಚ್ಚಲ ಪಂದ್ಯದಲ್ಲೇ ಅತೀ ವೇಗದಲ್ಲಿ ಚೆಂಡೆಸೆದು ಐಪಿಎಲ್ 2024 ರಲ್ಲಿ ದಾಖಲೆ ಬರೆದಿದ್ದಾರೆ.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದ ಮಯಾಂಕ್ ಯಾದವ್ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ್ದರು. 149 kmph ವೇಗದೊಂದಿಗೆ ಐಪಿಎಲ್ ಕೆರಿಯರ್ ಆರಂಭಿಸಿದ ಯುವ ವೇಗಿಯನ್ನು ಎದುರಿಸಲು ಪಂಜಾಬ್ ಕಿಂಗ್ಸ್ ತಂಡದ ಅನುಭವಿ ಬ್ಯಾಟರ್ಗಳು ತಿಣುಕಾಡಿದರು.
ಅದರಲ್ಲೂ ಮಯಾಂಕ್ ಯಾದವ್ ಎಸೆದ 12ನೇ ಓವರ್ನ ಮೊದಲ ಎಸೆತವು ಶಿಖರ್ ಧವನ್ ಕಣ್ಣು ಮಿಟುಕುವಷ್ಟರಲ್ಲಿ ವಿಕೆಟ್ ಕೀಪರ್ ಕೈ ಸೇರಿತ್ತು. ಈ ಎಸೆತವು ಬರೋಬ್ಬರಿ 155.8 kmph ಸ್ಪೀಡ್ ಹೊಂದಿತ್ತು ಎಂಬುದು ವಿಶೇಷ. ಇದರೊಂದಿಗೆ ಐಪಿಎಲ್ 2024 ರಲ್ಲಿ ಅತೀ ವೇಗದಲ್ಲಿ ಚೆಂಡೆಸೆದ ದಾಖಲೆ ಮಯಾಂಕ್ ಯಾದವ್ ಪಾಲಾಗಿದೆ.
ಇದಕ್ಕೂ ಮುನ್ನ ಈ ದಾಖಲೆ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಸೌತ್ ಆಫ್ರಿಕಾದ ವೇಗದ ಬೌಲರ್ ನಾಂಡ್ರೆ ಬರ್ಗರ್ ಹೆಸರಿನಲ್ಲಿತ್ತು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಬರ್ಗರ್ 153 kmph ವೇಗದಲ್ಲಿ ಚೆಂಡೆಸೆದು ಗಮನ ಸೆಳೆದಿದ್ದರು. ಇದೀಗ 21 ರ ಹರೆಯದ ಮಯಾಂಕ್ ಯಾದವ್ ಸತತವಾಗಿ 145 ರಿಂದ 150 ಅಸುಪಾಸಿನಲ್ಲಿ ಚೆಂಡೆಸೆಯುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಅಷ್ಟೇ ಅಲ್ಲದೆ 155.8 kmph ವೇಗದಲ್ಲಿ ಬೆಂಕಿ ಎಸೆತದೊಂದಿಗೆ ಈ ಬಾರಿಯ ಐಪಿಎಲ್ನಲ್ಲಿ ಅತೀ ವೇಗದಲ್ಲಿ ಚೆಂಡೆಸೆದ ಬೌಲರ್ ಎನಿಸಿಕೊಂಡಿದ್ದಾರೆ.