ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಹರ್ಷಲ್ ಪಟೇಲ್ ಈ ಸೀಸನ್ ನಲ್ಲೂ ದುಬಾರಿಯಾಗಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಈ ಪಂದ್ಯದಲ್ಲಿ 4 ಓವರ್ಗಳನ್ನು ಬೌಲಿಂಗ್ ಮಾಡಿರುವ ಹರ್ಷಲ್ ಪಟೇಲ್ ಬರೋಬ್ಬರಿ 45 ರನ್ ನೀಡಿದ್ದಾರೆ. ಇದಕ್ಕೂ ಮುನ್ನ ನಡೆದ ಎರಡೂ ಪಂದ್ಯಗಳಲ್ಲೂ ಹರ್ಷಲ್ ಪಟೇಲ್ 10ರ ಸರಾಸರಿಯಲ್ಲಿ ರನ್ ಬಿಟ್ಟು ಕೊಟ್ಟಿದ್ದರು.
ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಹರ್ಷಲ್ ಪಟೇಲ್ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಬರೋಬ್ಬರಿ 11.75 ಕೋಟಿ ರೂ. ನೀಡಿ ಖರೀದಿಸಿತ್ತು. ಈ ದುಬಾರಿ ಖರೀದಿಯೂ ಇದೀಗ ಪಂಜಾಬ್ ಕಿಂಗ್ಸ್ ಪಾಲಿಗೆ ದುಬಾರಿಯಾಗಿ ಪರಿಣಮಿಸುತ್ತಿದೆ. ಇದಕ್ಕೆ ಸಾಕ್ಷಿಯೇ ಕಳೆದ ಮೂರು ಪಂದ್ಯಗಳಲ್ಲಿನ ಹರ್ಷಲ್ ಅವರ ಪ್ರದರ್ಶನ.
ಟೀಮ್ ಇಂಡಿಯಾ ವೇಗಿಯ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಪಂಜಾಬ್ ಕಿಂಗ್ಸ್ ಪಾಲಿಗೆ ಹರ್ಷಲ್ ಪಂದ್ಯದಿಂದ ಪಂದ್ಯಕ್ಕೆ ದುಬಾರಿಯಾಗುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ 4 ಓವರ್ ಎಸೆದಿದ್ದ ಹರ್ಷಲ್ ನೀಡಿದ್ದು ಬರೋಬ್ಬರಿ 47 ರನ್ಗಳು
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಹರ್ಷಲ್ ಪಟೇಲ್ 4 ಓವರ್ಗಳಲ್ಲಿ 45 ರನ್ಗಳು ಬಿಟ್ಟುಕೊಟ್ಟಿದ್ದರು. ಇದುವೇ ಆರ್ಸಿಬಿ ವಿರುದ್ಧ ಪಂಜಾಬ್ ತಂಡದ ಸೋಲಿಗೆ ಕಾರಣವಾಗಿತ್ತು.
ಇದೀಗ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್ಗಳಲ್ಲಿ 45 ರನ್ ನೀಡಿದ್ದಾರೆ. ಡೆತ್ ಓವರ್ಗಳ ವೇಳೆ ಹೆಚ್ಚಿನ ರನ್ ನೀಡುವ ಮೂಲಕ ಮತ್ತೊಮ್ಮೆ ಹರ್ಷಲ್ ಪಟೇಲ್ ಪಂಜಾಬ್ ಪಾಲಿಗೆ ಕಂಟಕವಾಗಿ ಪರಿಣಮಿಸಿದ್ದಾರೆ.