ಕ್ರೀಡಾಂಗಣದಲ್ಲಿ ಹಾರ್ದಿಕ್ರನ್ನು ನಿಂದಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಂಸಿಎ ಖಡಕ್ ಎಚ್ಚರಿಕೆ ನೀಡಿದೆ.
ರೋಹಿತ್ರಿಂದ ನಾಯಕತ್ವ ಕಿತ್ತುಕೊಂಡರು ಎಂಬ ವಿಚಾರದಲ್ಲಿ ನಿಂದನೆಗೆ ಒಳಗಾಗಿದ್ದ ಪಾಂಡ್ಯ ಆ ಬಳಿಕ ತಂಡದ ಸತತ ಸೋಲಿನೊಂದಿಗೆ ಟ್ರೋಲಿಗರಿಗೆ ಆಹಾರವಾಗಿದ್ದರು.
ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ತಂಡ ಆಡಿದ ಎರಡೂ ಪಂದ್ಯಗಳನ್ನು ಸೋತಿದೆ. ಈ ವೇಳೆ ಹಾರ್ದಿಕ್ ಪಾಂಡ್ಯರ ನಾಯಕತ್ವದ ಮೇಲೆ ಸಾಕಷ್ಟು ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಅಲ್ಲದೆ ಪಂದ್ಯ ನೋಡಲು ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳು ಹಾರ್ದಿಕ್ರನ್ನು ಮನಬಂದಂತೆ ನಿಂದಿಸುತ್ತಿದ್ದಾರೆ. ಅದರ ವಿಡಿಯೋಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದವು.
ಇದೀಗ ಕ್ರೀಡಾಂಗಣದಲ್ಲಿ ಹಾರ್ದಿಕ್ರನ್ನು ನಿಂದಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಮುಂದಾಗಿದೆ. ವಾಸ್ತವವಾಗಿ ಮುಂಬೈ ಇಂಡಿಯನ್ಸ್ ತನ್ನ ತವರು ನೆಲವಾದ ವಾಂಖೆಡೆ ಸ್ಟೇಡಿಯಂನಲ್ಲಿ ಸೋಮವಾರ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.
ಈ ಪಂದ್ಯದ ಸಮಯದಲ್ಲಿ ಕ್ರೀಡಾಂಗಣದಲ್ಲಿ ಉಪಸ್ಥಿತರಿರುವ ಅಭಿಮಾನಿಗಳು ಹಾರ್ದಿಕ್ರನ್ನು ನಿಂದಿಸುವ ಕೆಲಸವನ್ನು ಮಾಡಿದರೆ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಅದರಂತೆ ಟ್ರೋಲ್ ಮಾಡುವವರನ್ನು ಹಾಗೂ ನಿಂದಿಸುವವರನ್ನು ಮೈದಾನದಿಂದ ಹೊರಹಾಕಲು ತೀರ್ಮಾನಿಸಿದೆ.