ಬೆಂಗಳೂರು: ತವರು ಮೈದಾನ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (chinnaswamy stadium) ಇಂದು (ಮಾ.29) ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡವನ್ನು ಎದುರಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ ಸಜ್ಜಾಗಿದೆ.
ಸ್ಫೋಟಕ ಅರ್ಧಶತಕ ಮತ್ತು ಬೌಲರ್ಗಳ ನೆರವಿನಿಂದ ರಾಜಸ್ಥಾನ ರಾಯಲ್ಸ್ʼಗೆ ಭರ್ಜರಿ ಗೆಲುವು!
17ನೇ ಆವೃತ್ತಿಯ ಐಪಿಎಲ್ನಲ್ಲಿ ಆರ್ಸಿಬಿಗೆ ಇದು 3ನೇ ಪಂದ್ಯವಾಗಿದ್ದು, ತವರಿನಲ್ಲಿ ನಡೆಯುತ್ತಿರುವ 2ನೇ ಪಂದ್ಯವಾಗಿದೆ. ಇನ್ನೂ ಕೆಕೆಆರ್ಗೆ ಆವೃತ್ತಿಯ 2ನೇ ಪಂದ್ಯವಾಗಿದೆ. ಇತ್ತಂಡಗಳು ಈವರೆಗೆ ಒಟ್ಟು 32 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆರ್ಸಿಬಿ 14 ರಲ್ಲಿ ಗೆಲುವು ಸಾಧಿಸಿದ್ದರೆ, ಕೋಲ್ಕತ್ತಾ 18 ಪಂದ್ಯಗಳಲ್ಲಿ ಜಯಗಳಿಸಿದೆ. ಕೆಕೆಆರ್ ವಿರುದ್ಧ ಬೆಂಗಳೂರು ತಂಡ ಗರಿಷ್ಠ ರನ್ 213 ಆಗಿದ್ದರೆ, ಬೆಂಗಳೂರು ತಂಡದ ವಿರುದ್ಧ ಕೆಕೆಆರ್ ಗಳಿಸಿರುವ ಗರಿಷ್ಠ ರನ್ 222 ರನ್ ಆಗಿದೆ.
ಶ್ರೇಯಸ್ ಅಯ್ಯರ್ ನಾಯಕತ್ವದ ಕೆಕೆಆರ್ ಪಡೆ, ತನ್ನ ತವರು ಮೈದಾನದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯ ಸಾಧಿಸಿತ್ತು. ಅತ್ತ ಆರ್ಸಿಬಿ ತಂಡವು ಆಡಿರುವ 2 ಪಂದ್ಯಗಳಲ್ಲಿ, ಪಂಜಾಬ್ ವಿರುದ್ಧದ ಕೊನೆಯ ಪಂದ್ಯ ಗೆದ್ದು 2 ಅಂಕ ಸಂಪಾದಿಸಿದೆ. ತಂಡವು ಸದ್ಯ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದರೆ, ಕೋಲ್ಕತಾ 1 ಪಂದ್ಯದಿಂದ 2 ಅಂಕ ಗಳಿಸಿ 4ನೇ ಸ್ಥಾನದಲ್ಲಿದೆ.
ಬೆಂಗಳೂರು ಮೈದಾನವು ಚಿಕ್ಕ ಬೌಂಡರಿಗಳನ್ನು ಹೊಂದಿರುವುದರಿಂದ ಇದು ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದೆ. ಈ ಪಂದ್ಯದಲ್ಲಿ ಉಭಯ ತಂಡಗಳಲ್ಲೂ ಪವರ್ ಹಿಟ್ಟರ್ಗಳಿದ್ದಾರೆ. ಹೀಗಾಗಿ ಬ್ಯಾಟರ್ಗಳಿಗೆ ಪಿಚ್ ಸ್ವರ್ಗವಾಗಿದ್ದು, ರನ್ ಹೊಳೆ ಹರಿಯುವ ಸಾಧ್ಯತೆಗಳಿವೆ.