ಡಾಲಿ ಧನಂಜಯ್ ನಟನೆಯ ಉತ್ತರಕಾಂಡ ಚಿತ್ರದ ಚಿತ್ರೀಕರಣ ಮುಂದಿನ ವಾರದಲ್ಲಿ ಆರಂಭಗೊಳ್ಳಲಿದೆ. ಅದಕ್ಕೂ ಮೊದಲು ನಟ ಡಾಲಿ ಧನಂಜಯ್, ನಿರ್ದೇಶಕ ರೋಹಿತ್ ಪದಕಿ ಹಾಗೂ ನಿರ್ಮಾಪಕ ಕಾರ್ತಿಕ್ ಗೌಡ ಧಾರವಾಡದ ನುಗ್ಗೇಕೇರಿಯ ಶ್ರೀ ಹನುಮಂತ ದೇವಾಲಯಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದಾರೆ.
ನುಗ್ಗೇಕೇರಿ ಶ್ರೀ ಹನುಮಂತ ದೇವಾಲಯ ಧಾರವಾಡದ ಪುರಾತನ ಮತ್ತು ಪ್ರಖ್ಯಾತ ದೇವಾಲಯವಾಗಿದೆ. ಉತ್ತರಕಾಂಡ ಒಂದು ಆಕ್ಷನ್ ಡ್ರಾಮಾ ಚಿತ್ರವಾಗಿದ್ದು ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಡಾಲಿ ಧನಂಜಯ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಹಾಗೂ ಕೆ ಆರ್ ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿ ಬರಲಿದೆ.
ಉತ್ತರಕಾಂಡ ಸಿನಿಮಾದ ಮೂಲಕ ನಟಿ ರಮ್ಯಾ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇತ್ತೀಚೆಗೆ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಹೇಳುವ ಮೂಲಕ ರಮ್ಯಾ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು.
ಡೇಟ್ಸ್ ಹೊಂದಾಣಿಕೆ ಆಗದ ಕಾರಣ, ನಾನು ಉತ್ತರಕಾಂಡ ಸಿನಿಮಾದಲ್ಲಿ ನಟಿಸುತ್ತಿಲ್ಲ. ನನ್ನ ಸಿನಿಮಾ ಮತ್ತು ರಾಜಕೀಯ ಕೆಲಸಗಳನ್ನು ಸದ್ಯ ಕಾಯ್ದಿರಿಸಿದ್ದೇನೆ. ಆದರೆ ಚಿತ್ರತಂಡಕ್ಕೆ ಶುಭವಾಗಲಿ ಎಂದು ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದರು. ಸದ್ಯ ರಮ್ಯಾರಿಂದ ತೆರವಾಗಿರುವ ಜಾಗಕ್ಕೆ ಯಾರು ಬರ್ತಾರೆ ಎಂದು ಕಾದು ನೋಡಬೇಕು.