ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ 200ನೇ ಪಂದ್ಯವಾಡಿದ ಮೊದಲ ಆಟಗಾರ ಎಂಬ ದಾಖಲೆಗೆ ಹಿಟ್ಮ್ಯಾನ್ ರೋಹಿತ್ ಶರ್ಮಾ ಭಾಜನರಾಗಿದ್ದಾರೆ. 200ನೇ ಪಂದ್ಯವನ್ನು ಸ್ಮರಣೀಯವಾಗಿಸಲು ಗಾಡ್ ಆಫ್ ಕ್ರಿಕೆಟ್ ಖ್ಯಾತಿಯ ಸಚಿನ್ ತೆಂಡೂಲ್ಕರ್, 200ನೇ ಸಂಖ್ಯೆಯ ಜೆರ್ಸಿಯನ್ನು ರೋಹಿತ್ ಶರ್ಮಾಗೆ ನೀಡಿ ಅಭಿನಂದಿಸಿದ್ದಾರೆ.
2009ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಫೈನಲ್ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ಆಡುವ ಮೂಲಕ ಚೊಚ್ಚಲ ಟ್ರೋಫಿ ಗೆದ್ದಿದ್ದ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲೇ ರೋಹಿತ್ ಶರ್ಮಾ ತಮ್ಮ 200ನೇ ಪಂದ್ಯ ಆಡಿರುವುದು ವಿಶೇಷವಾಗಿದೆ. 2024ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಹೊರೆಯನ್ನು ರೋಹಿತ್ ಶರ್ಮಾರಿಂದ ಕೆಳಗಿಳಿಸಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಗೆ ನೀಡಲಾಗಿದೆ.
ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದಿದ್ದ ವಿಶೇಷ ಸಮಾರಂಭದ ವಿಡಿಯೋವನ್ನು ಮುಂಬೈ ಫ್ರಾಂಚೈಸಿ ಅಪ್ ಲೋಡ್ ಮಾಡಿದೆ. ವಿಡಿಯೋದಲ್ಲಿ ಕೆಲ ಸಮಯದ ಸಂವಾದದ ನಂತರ ಗಾಡ್ ಆಫ್ ಕ್ರಿಕೆಟ್ ಖ್ಯಾತಿಯ ಸಚಿನ್ ತೆಂಡೂಲ್ಕರ್ ಅವರು 200ನೇ ನಂಬರ್ನ ಜೆರ್ಸಿಯನ್ನು ರೋಹಿತ್ ಶರ್ಮಾಗೆ ನೀಡಿದ್ದಾರೆ. 36ರ ಪ್ರಾಯದ ರೋಹಿತ್ ಶರ್ಮಾ ಐಪಿಎಲ್ ಟೂರ್ನಿಯಲ್ಲಿ 245 ಪಂದ್ಯಗಳನ್ನಾಡಿದ್ದು, ಮುಂಬೈ ಇಂಡಿಯನ್ಸ್ ಪರ 200ನೇ ಪಂದ್ಯ ಆಡಿದ ಮೊದಲ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ.