ಬಿಗ್ ಬಾಸ್ ನ ಮಾಜಿ ಸ್ಪರ್ಧಿಗಳು ಒಬ್ಬರ ಹಿಂದೊಬ್ಬರಂತೆ ಸಮಸ್ಯೆಗೆ ಸಿಲುಕಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ನ ಮಾಜಿ ಸ್ಪರ್ಧಿಗಳಾದ ಎಲ್ವಿಶ್ ಯಾದವ್ ಹಾಗೂ ವಿಜೇತ ಮುನಾವತ್ ಈಗಾಗಲೇ ಜೈಲಿಗೆ ಹೋಗಿ ಬಂದಿದ್ದಾರೆ. ಇದೀಗ ಬಿಗ್ ಬಾಸ್ ನ ಮತ್ತೋರ್ವ ಸ್ಪರ್ಧಿ ಖ್ಯಾತ ಯುಟ್ಯೂಬರ್ ಅನುರಾಗ್ ದೋಬಲ್ ಕೂಡ ಪೊಲೀಸರಿಂದ ಸಮಸ್ಯೆ ಎದುರಿಸಿದ್ದಾರೆ.
ಅನುರಾಗ್ ಅವರ ಅತ್ಯಂತ ದುಬಾರಿ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು ಮೂರು ಕೋಟಿ ದಂಡ ವಿಧಿಸಿದ್ದಾರೆ. ಯೂಟ್ಯೂಬರ್ ಅನುರಾಗ್ ದೋಬಲ್, ಯುಕೆ 07 ರೈಡರ್ ಹೆಸರಿನ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು ಐಶಾರಾಮಿ ಕಾರು, ಬೈಕ್ಗಳನ್ನು ಖರೀದಿ ಮಾಡಿ ಚಲಾಯಿಸುತ್ತಾರೆ. ಸೆಲೆಬ್ರಿಟಿಗಳೊಟ್ಟಿಗೆ ಕಾರ್ನಲ್ಲಿ ರೈಡ್ ಸಹ ಹೋಗುತ್ತಾರೆ. ಐಪಿಎಲ್ ಸಮಯವಾದ್ದರಿಂದ ಐಪಿಎಲ್ನ ಸೆಲೆಬ್ರಿಟಿಗಳೊಟ್ಟಿಗೆ ವಿಡಿಯೋ ಮಾಡಲು ಚೆನ್ನೈಗೆ ತಮ್ಮ ದುಬಾರಿ ಲ್ಯಾಂಬೊರ್ಗಿನಿ ಕಾರನ್ನು ಅನುರಾಗ್ ದೋಬಲ್ ತಂದಿದ್ದರು. ಇಲ್ಲಿ ಕ್ರಿಕೆಟಿಗ ಸುರೇಶ್ ರೈನಾ ಜೊತೆ ವಿಡಿಯೋ ಮಾಡಿ ಇನ್ನೇನು ಹೊರಡಬೇಕಾದರೆ ಅವರ ಕಾರನ್ನು ಚೆನ್ನೈ ಪೊಲೀಸರು ಸೀಜ್ ಮಾಡಿದ್ದಾರೆ.
ಸುಮಾರು 4 ಕೋಟಿಗೂ ಹೆಚ್ಚು ಬೆಲೆಯ ಲ್ಯಾಂಬೊರ್ಗಿನಿ ಹುರಿಕೇನ್ ಕಾರನ್ನು ಅನುರಾಗ್ ದೋಬಲ್ ಇತ್ತೀಚೆಗಷ್ಟೆ ಖರೀದಿ ಮಾಡಿದ್ದರು. ವಿಶೇಷವಾಗಿ ಐಪಿಎಲ್ ಸೀಸನ್ನಲ್ಲಿ ಕಂಟೆಂಟ್ ಕ್ರಿಯೇಷನ್ ಮಾಡಲೆಂದು ಈ ಕಾರು ಖರೀದಿ ಮಾಡಲಾಗಿತ್ತು. ಅದರಂತೆ ಚೆನ್ನೈಗೆ ಕಾರನ್ನು ಪ್ಲಾಟ್ಬೆಡ್ ಮೇಲೆ ಟ್ರಾನ್ಸ್ಪೋರ್ಟ್ ಮಾಡಿಕೊಂಡು ಇಲ್ಲಿ ಸುರೇಶ್ ರೈನಾ ಜೊತೆ ಶೂಟ್ ಮಾಡಿದ್ದ ಅನುರಾಗ್ ದೋಬಲ್, ಮುಂದಿನ ಶೂಟ್ಗಾಗಿ ಕಾರನ್ನು ಫ್ಲ್ಯಾಟ್ ಬೆಡ್ ಮೇಲೆ ಇರಿಸಿ ದೊಡ್ಡ ಲಾರಿಯೊಂದಕ್ಕೆ ಕಾರನ್ನು ಹಾಕಿ ದೆಹಲಿಗೆ ಕಳಿಸಿ ತಾವು ದೆಹಲಿಗೆ ವಿಮಾನದಲ್ಲಿ ಹೋಗಲು ತಯಾರಾಗಿದ್ದರು. ಆದರೆ ಆ ಲಾರಿಗೆ ಸೂಕ್ತವಾದ ದಾಖಲೆಗಳು ಇಲ್ಲದ ಕಾರಣ ಚೆನ್ನೈ ಪೊಲೀಸರು ಲಾರಿ ಜೊತೆಗೆ ಲ್ಯಾಂಬೊರ್ಗಿನಿ ಕಾರನ್ನು ಸೀಜ್ ಮಾಡಿದ್ದಾರೆ.
ವ್ಲಾಗರ್ ಆಗಿರುವ ಅನುರಾಗ್ ದೋಬಲ್ ತಮ್ಮ ಕಾರನ್ನು ಟ್ರಾನ್ಸ್ಪೋರ್ಟ್ ಮಾಡುತ್ತಿರುವ ದೃಶ್ಯಗಳನ್ನು, ಸೀಜ್ ಆಗಿರುವ ವಿವರಗಳನ್ನು ವಿಡಿಯೋ ಮಾಡಿ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ತಮಗೆ 3 ರಿಂದ 3.50 ಕೋಟಿ ರೂಪಾಯಿ ದಂಡ ಪಾವತಿ ಮಾಡಬೇಕಾಗಿ ಬರಬಹುದು ಎಂದು ಸಹ ಅನುರಾಗ್ ದೋಬಲ್ ಹೇಳಿಕೊಂಡಿದ್ದಾರೆ.