ಕೆಜಿಎಫ್ ಸಿನಿಮಾದ ಬಳಿಕ ಯಶ್ ನಟನೆಯ ಮುಂದಿನ ಚಿತ್ರ ಟಾಕ್ಸಿಕ್ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿವೆ. ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅಭಿನಯಿಸುತ್ತಾರೆ ಎಂಬ ಸುದ್ದಿ ಕೇಳಿ ಬಂದಿದ್ದು ಅದಕ್ಕೀಗ ಸ್ಪಷ್ಟನೆ ಸಿಕ್ಕಿದೆ.
‘ಟಾಕ್ಸಿಕ್’ ಚಿತ್ರದಲ್ಲಿ ನಟಿ ಕರೀನಾ ಕಪೂರ್ ಖಾನ್ ಅವರು ಯಶ್ಗೆ ಸಹೋದರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ಟಾಕ್ಸಿಕ್ ಚಿತ್ರವು ಸಹೋದರ ಮತ್ತು ಸಹೋದರಿ ನಡುವಿನ ಕಥೆಯಾಗಿದ್ದು, ಯಶ್ ಮತ್ತು ಕರೀನಾ ಇಲ್ಲಿ ಒಡಹುಟ್ಟಿದವರಾಗಿ ಕಾಣಿಸಿಕೊಳ್ಳಲಿದ್ದಾರೆ.
ನಿರ್ದೇಶಕಿ ಗೀತು ಮೋಹನ್ದಾಸ್ ಅವರು ಕರೀನಾ ಅವರನ್ನೇ ಈ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಬೇಕು ಎಂದು ಬಹಳ ಆಸಕ್ತಿ ಹೊಂದಿದ್ದರು. ಸದ್ಯ ಮಾತುಕತೆಗಳು ಇನ್ನೂ ಚಾಲ್ತಿಯಲ್ಲಿದ್ದು ಕರೀನಾ ಕಡೆಯಿಂದ ಆಲ್ ಮೋಸ್ಟ್ ಗ್ರೀನ್ ಸಿಗ್ನಲ್ ಸಿಕ್ಕಿದೆಯಂತೆ.
ಇನ್ನು, ಯಶ್ ಅವರಿಗೆ ‘ಟಾಕ್ಸಿಕ್’ ಸಿನಿಮಾದಲ್ಲಿ ಯಾರು ಜೋಡಿ ಆಗುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಬಾಲಿವುಡ್ನ ಖ್ಯಾತ ನಟಿ ಕಿಯಾರಾ ಅಡ್ವಾಣಿ ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಾರೆ ಎಂಬ ಸುದ್ದಿ ಇದೆ. ಮತ್ತೊಂದೆಡೆ ನಟಿ ಶ್ರುತಿ ಹಾಸನ್ ಯಶ್ ಗೆ ಜೋಡಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಚಿತ್ರತಂಡ ಯಾವುದೇ ಪಾತ್ರವರ್ಗದ ಗುಟ್ಟು ಬಿಟ್ಟುಕೊಟ್ಟಿಲ್ಲ.
ಇನ್ನು, ಈಚೆಗಷ್ಟೇ ಮಾಹಿತಿ ಹಂಚಿಕೊಂಡಿದ್ದ ನಟ ಯಶ್ ಅವರು, “ಶೀಘ್ರದಲ್ಲೇ ಶೂಟಿಂಗ್ ಶುರುವಾಗಲಿದೆ. ಪ್ರೀ-ಪ್ರೊಡಕ್ಷನ್ಸ್ ಕೆಲಸಗಳು ಚಾಲ್ತಿಯಲ್ಲಿವೆ. ವಾರಕ್ಕೊಂದು ಸುದ್ದಿಗಳು ಬರುತ್ತಿವೆ. ನಾನಾಗಿಯೇ ಹೇಳುವವರೆಗೂ ಕಾಯಿರಿ. ಶೂಟಿಂಗ್ ಇಲ್ಲ ಎಂದು ನಾನು ಸುಮ್ಮನೇ ಕೂತಿಲ್ಲ. ನಾನು ತುಂಬಾ ಬ್ಯುಸಿ ಇದ್ದೀನಿ. ಸಾಕಷ್ಟು ಸಿದ್ಧತೆಗಳು ನಡೆಯುತ್ತಿವೆ” ಎಂದಿದ್ದಾರೆ.