ಬೆಂಗಳೂರು:- ಬಿಬಿಎಂಪಿ ಆಸ್ತಿ ತೆರಿಗೆ ದರ ಹೆಚ್ಚಳ ಸುಳ್ಳು ಸುದ್ದಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಏಪ್ರಿಲ್ 1, 2024 ರಿಂದ ಬಿಬಿಎಂಪಿ ಆಸ್ತಿ ತೆರಿಗೆ ದರವನ್ನು ಹೆಚ್ಚಿಸುವ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಸುದ್ದಿ ಪೆಡ್ಲರ್ಗಳು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ನನ್ನ ಗಮನಕ್ಕೆ ಬಂದಿದೆ. ಬಿಬಿಎಂಪಿ ಯಾವುದೇ ಆಸ್ತಿ ತೆರಿಗೆಯನ್ನು ಹೆಚ್ಚಿಸಿಲ್ಲ, 2016 ರಲ್ಲಿ ನಿಗದಿಪಡಿಸಿದ ದರದಲ್ಲಿಯೇ ವಿಧಿಸಲಾಗುವುದು. ದಯವಿಟ್ಟು ಈ ಬಗ್ಗೆ ಯಾವುದೇ ವದಂತಿಗಳನ್ನು ನಂಬಬೇಡಿ” ಎಂದು ಮನವಿ ಮಾಡಿದ್ದಾರೆ.
ಕರ್ನಾಟಕದಲ್ಲಿ ಭಾರಿ ತೆರಿಗೆ ಹೆಚ್ಚಳವಾಗಲಿದೆ ಎಂದು ಇಂಡೆಕ್ಸ್.ಡೈಲಿ ಎಂಬ ಇನ್ಸ್ಟಾಗ್ರಾಂ ಪೇಜ್ನಲ್ಲಿ ಅನುರಾಗ್ ಸಿಂಗ್ ಎಂಬುವವರು ವಿಡಿಯೊ ಹರಿಯಬಿಟ್ಟಿದ್ದರು. ಬಾಡಿಗೆ ಮನೆಗಳ ಮೇಲಿನ ಆಸ್ತಿ ತೆರಿಗೆ ಎರಡು ಪಟ್ಟು, ವಾಣಿಜ್ಯ ಸಂಸ್ಥೆಗಳ ಮೇಲಿನ ತೆರಿಗೆ 3 ರಿಂದ 5 ಪಟ್ಟು ಹೆಚ್ಚಳವಾಗಲಿದೆ ಎಂದು ಹೇಳಿದ್ದರು.
ಇದರ ಬೆನ್ನಲ್ಲೇ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, 1ನೇ ಏಪ್ರಿಲ್ 2024 ರಿಂದ ಬಿಬಿಎಂಪಿಯಲ್ಲಿ ಆಸ್ತಿ ತೆರಿಗೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ಕೆಲವು ಸುಳ್ಳು ಸುದ್ದಿಯ ವೀಡಿಯೊಗಳು ಹರಿದಾಡುತ್ತಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯಲ್ಲಿ ಯಾವುದೇ ಹೆಚ್ಚಳ ಮಾಡುತ್ತಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ ಎಂದಿದ್ದಾರೆ.