ಕೋಲ್ಕತಾ: ಕೊನೆಯ ಎಸೆತದವರೆಗೂ ಅತ್ಯಂತ ರೋಚಕತೆಯಿಂದ ಕೂಡಿದ್ದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ನ ಮೂರನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಎದುರು ಕೋಲ್ಕತಾ ನೈಟ್ ರೈಡರ್ಸ್ 4 ರನ್ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಟೂರ್ನಿಯಲ್ಲಿ ಶುಭಾರಂಭ ಕಂಡಿತು. ಇಲ್ಲಿನ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ನೀಡಿದ್ದ 209 ರನ್ಗಳ ಬೃಹತ್ ಮೊತ್ತವನ್ನು ಗುರಿ ಹಿಂಬಾಲಿಸಿದ ಹೆನ್ರಿಕ್ ಕ್ಲಾಸೆನ್ ಸ್ಪೋಟಕ ಅರ್ಧಶತಕದ ಹೊರತಾಗಿಯೂ 20 ಒವರ್ಗಳಿಗೆ 7 ವಿಕೆಟ್ ನಷ್ಟಕ್ಕೆ 204 ರನ್ಗಳಿಗೆ ಸೀಮಿತವಾಯಿತು. ಆ ಮೂಲಕ ಹೈದರಾಬಾದ್ ತಂಡ ನಿರಾಶೆಗೆ ಜಾರಿತು.
ಈ ಪಂದ್ಯದಲ್ಲಿ ಆ್ಯಂಡ್ರೆ ರಸೆಲ್ 25 ಎಸೆತಗಳಲ್ಲಿ 3 ಫೋರ್ ಹಾಗೂ 7 ಸಿಕ್ಸ್ನೊಂದಿಗೆ ಅಜೇಯ 64 ರನ್ ಬಾರಿಸಿದ್ದರು. ಈ ಸ್ಪೋಟಕ ಅರ್ಧಶತಕದ ನೆರವಿನಿಂದ ಕೆಕೆಆರ್ ತಂಡವು 20 ಓವರ್ಗಳಲ್ಲಿ 208 ರನ್ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಎಸ್ಆರ್ಹೆಚ್ ಪರ ಹೆನ್ರಿಕ್ ಕ್ಲಾಸೆನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹೆನ್ರಿಕ್ ಕ್ಲಾಸೆನ್ 29 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ಗಳೊಂದಿಗೆ 63 ರನ್ ಚಚ್ಚಿದ್ದರು. ವಿಶೇಷ ಎಂದರೆ ಕ್ಲಾಸೆನ್ ಅವರ ಈ ಇನಿಂಗ್ಸ್ನಲ್ಲಿ ಒಂದೇ ಒಂದು ಫೋರ್ ಮೂಡಿಬಂದಿರಲಿಲ್ಲ. ಇದುವೇ ಈಗ ಹೊಸ ದಾಖಲೆಯಾಗಿ ಮಾರ್ಪಟ್ಟಿದೆ.
ಕ್ಯಾನ್ಸರ್ ರೋಗಿಗಳಿಗೆ ಗುಡ್ ನ್ಯೂಸ್: 72 ಲಕ್ಷ ರೂ. ನ ಕ್ಯಾನ್ಸರ್ ಔಷಧ ಇನ್ಮುಂದೆ 3 ಲಕ್ಷಕ್ಕೆ ಸಿಗುತ್ತೆ
ಅಂದರೆ ಐಪಿಎಲ್ ಇತಿಹಾಸದಲ್ಲಿ ಒಂದೇ ಒಂದು ಫೋರ್ ಬಾರಿಸದೇ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ ಎಂಬ ದಾಖಲೆ ಹೆನ್ರಿಕ್ ಕ್ಲಾಸೆನ್ ಹೆಸರಿಗೆ ಸೇರ್ಪಡೆಯಾಗಿದೆ. ಕೆಕೆಆರ್ ವಿರುದ್ಧ 8 ಸಿಕ್ಸ್ಗಳನ್ನು ಸಿಡಿಸುವ ಮೂಲಕ ಕ್ಲಾಸೆನ್ ಈ ವಿಶೇಷ ದಾಖಲೆ ಬರೆದಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ನಿತೀಶ್ ರಾಣಾ ಅವರ ಹೆಸರಿನಲ್ಲಿತ್ತು. 2017 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ರಾಣಾ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಒಂದೇ ಒಂದು ಫೋರ್ ಬಾರಿಸದೇ 7 ಸಿಕ್ಸ್ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಕ್ಲಾಸೆನ್ ಮುರಿದಿದ್ದಾರೆ.