ರನ್ ಮೆಷಿನ್ ಖ್ಯಾತಿಯ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕುವ ಮೂಲಕ ಶಿಖರ್ ಧವನ್ ಹೊಸ ಮೈಲುಗಲ್ಲು ದಾಟಿದ್ದಾರೆ.
ಐಪಿಎಲ್ನ 2ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಹೊಸ ಮೈಲ್ಲುಗಲ್ಲು ದಾಟಿದ್ದಾರೆ. ಅದು ಕೂಡ ಬೌಂಡರಿಗಳ ಮೂಲಕ ಎಂಬುದು ವಿಶೇಷ. ಅಂದರೆ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಬೌಂಡರಿಗಳನ್ನು ಬಾರಿಸಿದ ಬ್ಯಾಟ್ಸ್ಮನ್ ಎಂಬ ಹಿರಿಮೆಗೆ ಧವನ್ ಪಾತ್ರರಾಗಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಶಿಖರ್ ಧವನ್ 16 ಎಸೆತಗಳಲ್ಲಿ 4 ಫೋರ್ಗಳೊಂದಿಗೆ 22 ರನ್ ಬಾರಿಸಿದ್ದಾರೆ. ಈ ನಾಲ್ಕು ಫೋರ್ಗಳೊಂದಿಗೆ ಐಪಿಎಲ್ ಇತಿಹಾಸದಲ್ಲಿ 900 ಬೌಂಡರಿಗಳನ್ನು ಬಾರಿಸಿದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ಶಿಖರ್ ಧವನ್ ತಮ್ಮದಾಗಿಸಿಕೊಂಡಿದ್ದಾರೆ.
ಗಬ್ಬರ್ ಖ್ಯಾತಿಯ ಶಿಖರ್ ಧವನ್ 217 ಐಪಿಎಲ್ ಇನಿಂಗ್ಸ್ಗಳಲ್ಲಿ 754 ಫೋರ್ಗಳು ಮತ್ತು 148 ಸಿಕ್ಸ್ಗಳನ್ನು ಬಾರಿಸುವ ಮೂಲಕ 902 ಬೌಂಡರಿಗಳ ಸಾಧನೆ ಮಾಡಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ 900 ಬೌಂಡರಿಗಳ ಗಡಿದಾಟಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಶಿಖರ್ ಧವನ್ ಅವರ ನಂತರದ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದು, ಕಿಂಗ್ ಕೊಹ್ಲಿ ಇದುವರೆಗೆ 898 ಬೌಂಡರಿಗಳನ್ನು ಸಿಡಿಸಿದ್ದಾರೆ. ಹಾಗೆಯೇ ಮೂರನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಡೇವಿಡ್ ವಾರ್ನರ್ ಕಾಣಿಸಿಕೊಂಡಿದ್ದಾರೆ.