ಬಹುತೇಕ ರೋಗಿಗಳಿಗೆ ತಮಗೆ ಕ್ಯಾನ್ಸರ್ ಬಂದಿದೆ ಎಂದು ಗೊತ್ತಾಗುವಷ್ಟರಲ್ಲಿ ಆ ಕ್ಯಾನ್ಸರ್ ಕೋಶಗಳು ತೀವ್ರವಾಗಿ ಹರಡಿರುತ್ತದೆ. ಇಂತಹ ಸಂದರ್ಭದಲ್ಲಿ ಬದುಕುವ ಸಾಧ್ಯತೆ ಬಹಳ ಕಡಿಮೆ. ಈ ಗರ್ಭಕಂಠದ ಕ್ಯಾನ್ಸರ್ಗೆ ಅಸುರಕ್ಷಿತ ಲೈಂಗಿಕ ಕ್ರಿಯೆ ಪ್ರಮುಖವಾದ ಕಾರಣವಾಗಿದೆ.
ಗರ್ಭಕಂಠದ ಕ್ಯಾನ್ಸರ್ ಎಂಬುದು ಗರ್ಭಕಂಠದಲ್ಲಿ ಪ್ರಾರಂಭವಾಗುವ ಜೀವಕೋಶಗಳ ಬೆಳವಣಿಗೆಯಾಗಿದೆ. ಗರ್ಭಕಂಠವೆಂಬುದು ಗರ್ಭಾಶಯದ ಕೆಳಗಿನ ಭಾಗವಾಗಿದ್ದು ಅದು ಯೋನಿಯೊಂದಿಗೆ ಸಂಪರ್ಕಿಸುತ್ತದೆ. ಹೆಚ್ಪಿವಿ (HPV) ಎಂದು ಕರೆಯಲ್ಪಡುವ ಹ್ಯೂಮನ್ ಪ್ಯಾಪಿಲೋಮವೈರಸ್ನ ವಿವಿಧ ತಳಿಗಳು ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಉಂಟಾಗಲು ಮುಖ್ಯವಾದ ಪಾತ್ರ ವಹಿಸುತ್ತವೆ. ಈ HPV ಲೈಂಗಿಕ ಸಂಪರ್ಕದ ಮೂಲಕ ಹಾದುಹೋಗುವ ಸಾಮಾನ್ಯ ಸೋಂಕು.
ಬಹುತೇಕ ಗರ್ಭಕಂಠದ ಕ್ಯಾನ್ಸರ್ HPV ಸೋಂಕಿನಿಂದ ಉಂಟಾಗುತ್ತವೆ. HPV ಲೈಂಗಿಕ ಸಂಪರ್ಕದ ಮೂಲಕ ಹರಡುವ ಒಂದು ವೈರಸ್. ಹೆಚ್ಚಿನ ಜನರಿಗೆ ಈ ವೈರಸ್ ಯಾವುದೇ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ. ಇದು ತನ್ನಷ್ಟಕ್ಕೆ ತಾನೇ ದೇಹದಿಂದ ಹೊರಹೋಗುತ್ತದೆ. ಆದರೆ, ಕೆಲವರಿಗೆ ಮಾತ್ರ ಈ ವೈರಸ್ ಕ್ಯಾನ್ಸರ್ ಕೋಶಗಳ ಬೆಳವಣಿಗೆಗೆ ಕಾರಣವಾಗುತ್ತದೆ. HPV ಸೋಂಕು ಕೆಲವೊಮ್ಮೆ ಗರ್ಭಕಂಠದ ಕೋಶಗಳನ್ನು ಕ್ಯಾನ್ಸರ್ ಕೋಶಗಳಾಗಿ ಪರಿವರ್ತಿಸುತ್ತದೆ. ನಿಯಮಿತವಾಗಿ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಮತ್ತು HPV ಸೋಂಕಿನಿಂದ ರಕ್ಷಿಸುವ ಲಸಿಕೆಯನ್ನು ಪಡೆಯುವ ಮೂಲಕ ನೀವು ಗರ್ಭಕಂಠದ ಕ್ಯಾನ್ಸರ್ ಅಪಾಯವನ್ನು ನಿಯಂತ್ರಿಸಬಹುದು.
ಲೈಂಗಿಕವಾಗಿ ಸಕ್ರಿಯರಾಗಿರುವವರು ಕೆಲವೊಂದು ಲಕ್ಷಣಗಳು ಗೋಚರಿಸಿದರೆ ಆದಷ್ಟು ಬೇಗ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ಸಂಭೋಗದ ನಂತರ, ಪಿರಿಯಡ್ಸ್ ಮುಗಿದ ನಂತರ ಅಥವಾ ಋತುಬಂಧದ ನಂತರ ಯೋನಿಯಲ್ಲಿ ರಕ್ತಸ್ರಾವ ಉಂಟಾದರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ. ಮುಟ್ಟಿನ ಸಮಯದಲ್ಲಿ ವಿಪರೀತ ಮತ್ತು ದೀರ್ಘಕಾಲದವರೆಗೆ ರಕ್ತಸ್ರಾವ ಆಗುವುದು. ಯೋನಿಯಲ್ಲಿ ಕೆಟ್ಟ ವಾಸನೆ ಬರುವುದು, ಸಂಭೋಗದ ಸಮಯದಲ್ಲಿ ಬಹಳ ನೋವು ಉಂಟಾಗುವುದು ಗರ್ಭಕಂಠದ ಕ್ಯಾನ್ಸರ್ನ ಲಕ್ಷಣಗಳಾಗಿವೆ.
200 ಸಂಬಂಧಿತ ವೈರಸ್ಗಳ ಗುಂಪಾಗಿರುವ HPV ಕೆಲವು ಕಡಿಮೆ ಅಪಾಯಕಾರಿ ಮತ್ತು ಹೆಚ್ಚಿನ ಅಪಾಯಕಾರಿ ವೈರಸ್ಗಳನ್ನು ಹೊಂದಿರುತ್ತದೆ. ಹಾಗಂತ ಎಲ್ಲಾ ಅಪಾಯಕಾರಿ ವೈರಸ್ಗಳು ಗರ್ಭಕಂಠದ ಕ್ಯಾನ್ಸರ್ಗೆ ಕಾರಣವಾಗುವುದಿಲ್ಲ. ಹೆಚ್ಚು ಪ್ರಚಲಿತದಲ್ಲಿರುವ HPV 16 ಮತ್ತು HPV 18ನಿಂದ ಈ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಈ ವೈರಸ್ಗಳು ಲೈಂಗಿಕ ಸಂಪರ್ಕದ ಮೂಲಕ ಹರಡುತ್ತವೆ.
ವೈದ್ಯರ ಪ್ರಕಾರ, ನೀವು ಲೈಂಗಿಕವಾಗಿ ಸಕ್ರಿಯರಾಗಿದ್ದರೆ ನೀವು HPV ವೈರಸ್ಗೆ ಒಳಗಾಗುವ ಅಪಾಯವಿದೆ. HPV ಲೈಂಗಿಕವಾಗಿ ಹರಡುತ್ತದೆ. ಒಂದುವೇಳೆ ನೀವು ಒಬ್ಬರಿಗಿಂತ ಹೆಚ್ಚು ಜನರ ಜೊತೆ ಲೈಂಗಿಕ ಕ್ರಿಯೆ ನಡೆಸುವವರಾದರೆ ನೀವು ಗರ್ಭಕಂಠದ ಕ್ಯಾನ್ಸರ್ ಅನ್ನು ಹೊಂದುವ ಅಪಾಯವನ್ನು ಹೊಂದಿರುತ್ತೀರಿ. ಲೈಂಗಿಕವಾಗಿ ಸಕ್ರಿಯವಾಗಿರುವುದು ನಿಮಗೆ ಅಪಾಯವನ್ನುಂಟುಮಾಡುತ್ತದೆ. ಗರ್ಭಕಂಠದ ಕ್ಯಾನ್ಸರ್ಗೆ ಲಸಿಕೆಯನ್ನು ತೆಗೆದುಕೊಳ್ಳುವುದರಿಂದ ಕಾಲಾನಂತರದಲ್ಲಿ, ನೀವು ಈ ಅಪಾಯದಿಂದ ಶೇ. 95ರಷ್ಟು ಪ್ರಮಾಣದಲ್ಲಿ ಪಾರಾಗಬಹುದು.
ಲೈಂಗಿಕವಾಗಿ ಸಕ್ರಿಯವಾಗಿರುವ ಪುರುಷರು ಮತ್ತು ಮಹಿಳೆಯರಿಬ್ಬರೂ ನಿಯಮಿತ ತಪಾಸಣೆ, ವ್ಯಾಕ್ಸಿನೇಷನ್ಗಳನ್ನು ಹಾಕಿಸಿಕೊಳ್ಳಬೇಕು.