ಸಾಮಾನ್ಯವಾಗಿ ನಿನ್ನೆ ಉಳಿದಿರುವ ಆಹಾರವೆಂದರೆ ಅಸಡ್ಡೆ ಪಡುವವರೇ ಜಾಸ್ತಿ. ಆದರೆ ನಿನ್ನೆ ರಾತ್ರಿ ಉಳಿದಿರುವ ಅನ್ನದಿಂದ ಎಷ್ಟು ಪ್ರಯೋಜನವಿದೆ ಎಂದು ತಿಳಿದುಕೊಳ್ಳಿ. ವಿಶೇಷವಾಗಿ ಬೇಸಿಗೆ ಪ್ರಾರಂಭವಾಗಿದೆ. ಈ ಸಮಯದಲ್ಲಿ ಬೆಳಗ್ಗೆ ತಂಗಳನ್ನ ತಿನ್ನುವುದರಿಂದ ಆರೋಗ್ಯದ ಮೇಲೆ ಎಷ್ಟು ಪ್ರಯೋಜನಗಳಿವೆ ಎಂದು ತಿಳಿದುಕೊಳ್ಳಿ. ತಂಗಳನ್ನದ ಪ್ರಯೋಜನಗಳನ್ನು ಕುರಿತು ಮಾಹಿತಿ ನೀಡಿದ್ದಾರೆ.
ತಂಗಳನ್ನ ಏಕೆ ಆರೋಗ್ಯಕರ?
ಇಡೀ ಪ್ರಕ್ರಿಯೆಯಲ್ಲಿ, ಕ್ಯಾಲ್ಸಿಯಂ, ಕಬ್ಬಿಣಾಂಶ ಮತ್ತು ಮೆಗ್ನೀಸಿಯಮ್ನಂತಹ ಹಲವಾರು ಪೋಷಕಾಂಶಗಳ ಲಭ್ಯತೆ ಹೆಚ್ಚಾಗುತ್ತದೆ. ರಾತ್ರಿಯಲ್ಲಿ 12 ಗಂಟೆಗಳ ಕಾಲ ಅನ್ನವನ್ನು ನೀರಿನಲ್ಲಿ ಹುದುಗಿಸುವುದು ಸಾಮಾನ್ಯ ಬೇಯಿಸಿದ ಅನ್ನಕ್ಕೆ ಹೋಲಿಸಿದರೆ ಅದರ ಕಬ್ಬಿಣಾಂಶವು ದುಪ್ಪಟ್ಟಾಗುತ್ತದೆ.
ಹಾಗಾಗಿ ರಾತ್ರಿ ಉಳಿದ ಅನ್ನವನ್ನು ನೀರಿನಲ್ಲಿ ಹುದುಗಿಸಿಡುವುದು ಉಳಿದವುಗಳಿಗಿಂತ ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ.
ಬೇಸಿಗೆಯಲ್ಲಿ ತಂಗಳನ್ನ ತಿನ್ನುವುದರಿಂದಾಗುವ ಪ್ರಯೋಜನ ಇಲ್ಲಿವೆ
ರಾತ್ರಿ ಉಳಿದ ಅನ್ನವನ್ನು ಸಂಪೂರ್ಣವಾಗಿ ನೀರಿನಲ್ಲಿ ನೆನೆಸಿ ಮಣ್ಣಿನ ಪಾತ್ರೆಯಲ್ಲಿ ರಾತ್ರಿಯಿಡೀ ಸಂಗ್ರಹಿಸಿದರೆ ಮರುದಿನ ಬೆಳಿಗ್ಗೆ ಹುದುಗುತ್ತದೆ. ಈ ಅನ್ನವು ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ:
ಬೇಸಿಗೆಯಲ್ಲಿ ಬಿಸಿಲಿನ ಶಾಖದಿಂದ ನಿಮ್ಮ ದೇಹವನ್ನು ತಂಪಾಗಿಡುವಲ್ಲಿ ತಂಗಳನ್ನ ತುಂಬಾ ಸಹಾಯಕವಾಗಿದೆ. ಆದ್ದರಿಂದ ಬೆಳಗ್ಗಿನ ಉಪಹಾರದ ಬದಲಾಗಿ ತಂಗಳನ್ನವನ್ನು ವಿಶೇಷವಾಗಿ ಬೇಸಿಗೆಯಲ್ಲಿ ತಿನ್ನುವ ಆಭ್ಯಾಸವನ್ನು ರೂಢಿಸಿಕೊಳ್ಳಿ.
ಪೋಷಕಾಂಶಗಳು ಹೇರಳವಾಗಿದೆ:
ಉಳಿದ ಅನ್ನದಲ್ಲಿ ಸೂಕ್ಷ್ಮ ಪೋಷಕಾಂಶಗಳು ಮತ್ತು ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳು ಹೇರಳವಾಗಿರುವುದರಿಂದ, ಈ ಅನ್ನವನ್ನು ವಾರದಲ್ಲಿ ಮೂರು ದಿನ ಬೆಳಗ್ಗೆ ಸೇವಿಸುವುದರಿಂದ ನಿಮ್ಮನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.
ಮಲಬದ್ಧತೆಯನ್ನು ನಿವಾರಿಸುತ್ತದೆ:
ಬೇಸಿಗೆಯಲ್ಲಿ ಸಾಕಷ್ಟು ಜನರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ ಎಂದರೆ ಅದು ಮಲಬದ್ಧತೆ. ಇದಕ್ಕೆ ಪ್ರಮುಖ ಕಾರಣ ಕಡಿಮೆ ನೀರು ಕುಡಿಯುವುದು. ಆದ್ದರಿಂದ ಈಗಾಗಲೇ ಹೇಳಿರುವಂತೆ ತಂಗಳನ್ನದಲ್ಲಿ ಪೋಷಕಾಂಶಗಳು ಹೇರಳವಾಗಿರುವುದರ ಜೊತೆಗೆ ನೀರಿನಾಂಶವು ಹೆಚ್ಚಿರುತ್ತದೆ. ಇದು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುವಲ್ಲಿ ಉತ್ತಮ ಔಷಧಿಯಾಗಿದೆ.
ಬಾಯಿ ಹುಣ್ಣುಗಳಿಂದ ಮುಕ್ತಿ ನೀಡುತ್ತದೆ:
ಬೇಸಿಗೆಯಲ್ಲಿ ಇದ್ದಕ್ಕಿದ್ದ ಹಾಗೆ, ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಯಲ್ಲಿ ಬಾಯಿ ಹುಣ್ಣು ಕೂಡ ಒಂದು. ಇದು ಸಾಕಷ್ಟು ಕಿರಿ ಕಿರಿಯ ಜೊತೆಗೆ ನೋವನ್ನುಂಟು ಮಾಡುತ್ತದೆ. ವಾರಕ್ಕೆ ಮೂರು ಬಾರಿ ಬೆಳಗ್ಗೆ ತಂಗಳನ್ನವನ್ನು ಸೇವಿಸುವುದರಿಂದ ಶೀಘ್ರವಾಗಿ ಬಾಯಿ ಹುಣ್ಣಿನಿಂದ ಚೇತರಿಸಿಕೊಳ್ಳಬಹುದು.
ಆದರೆ ಯಾವತ್ತೂ ಅನ್ನವನ್ನು ಮತ್ತೆ ಬಿಸಿ ಮಾಡಿ ಸೇವಿಸಬೇಡಿ. ಅದು ನಿಮಗೆ ಅನಾರೋಗ್ಯವನ್ನುಂಟು ಮಾಡಬಹುದು. ಮತ್ತೆ ಬಿಸಿ ಮಾಡಿದ ಅನ್ನವನ್ನು ತಿನ್ನುವುದು ಆಹಾರ ವಿಷಕ್ಕೆ ಕಾರಣವಾಗಬಹುದು ಎಂದು ಇಂಗ್ಲೆಂಡಿನ ನ್ಯಾಷನಲ್ ಹೆಲ್ತ್ ಸರ್ವಿಸ್ (NHS) ಪ್ರಕಾರ ತಿಳಿದುಬಂದಿದೆ.