ಟಾಲಿವುಡ್ ಸ್ಟಾರ್ ರಾಮ್ಚರಣ್ ಹಾಗೂ ಸ್ಯಾಂಡಲ್ ವುಡ್ ಸ್ಟಾರ್ ಶಿವರಾಜ್ಕುಮಾರ್, ಬಿಟೌನ್ ಬ್ಯೂಟಿ ಜಾನ್ವಿ ಕಪೂರ್ ನಟನೆಯ ಹೊಸ ಸಿನಿಮಾಗೆ ಇಂದು (ಮಾ.20) ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಮುಹೂರ್ತ ಕಾರ್ಯಕ್ರಮಕ್ಕೆ ರಾಮ್ ಚರಣ್, ಜಾನ್ವಿ, ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಅನೇಕರು ಭಾಗಿಯಾಗಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ನಟಿ ಜಾನ್ವಿ ಕಪೂರ್ ಈಗಾಗಲೇ ತೆಲುಗಿನತ್ತ ಮುಖ ಮಾಡಿದ್ದಾರೆ. ಜ್ಯೂ.ಎನ್ಟಿಆರ್ ಜೊತೆ ಡ್ಯುಯೇಟ್ ಹಾಡಿದ ಮೇಲೆ ರಾಮ್ಚರಣ್ ಜೊತೆ ರೊಮ್ಯಾನ್ಸ್ ಮಾಡೋದಕ್ಕೆ ರೆಡಿಯಾಗಿದ್ದಾರೆ. ರಾಮ್ ಚರಣ್ ನಟನೆಯ 16ನೇ ಚಿತ್ರಕ್ಕೆ ಇದೀಗ ಅದ್ಧೂರಿಯಾಗಿ ಮುಹೂರ್ತ ನಡೆದಿದೆ.
ಸಿನಿಮಾದ ಮುಹೂರ್ತ ಕಾರ್ಯಕ್ರಮಕ್ಕೆ ರಾಮ್ಚರಣ್-ಉಪಾಸನಾ, ಬುಚ್ಚಿಬಾಬು ಜೊತೆ ಡೈರೆಕ್ಟರ್ ಶಂಕರ್, ಎ.ಆರ್ ರೆಹಮಾನ್, ಪುಷ್ಪ ಡೈರೆಕ್ಟರ್ ಸುಕುಮಾರ್, ಮೆಗಾಸ್ಟಾರ್ ಚಿರಂಜೀವಿ, ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ಮೊದಲ ಬಾರಿಗೆ ರಾಮ್- ಜಾನ್ವಿ ಕಪೂರ್ ಜೋಡಿಯಾಗಿ ನಟಿಸುತ್ತಿರೋದ್ರಿಂದ ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಕೂಡ ಚಿತ್ರದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀತ್ತೆಗೆ ಶಿವಣ್ಣ ಪರಭಾಷೆಯಲ್ಲಿ ಸಖತ್ ಡಿಮ್ಯಾಂಡ್ ಕ್ರಿಯೇಟ್ ಮಾಡಿದ್ದು ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿದ್ದಾರೆ.