ಬೆಂಗಳೂರು:- ಡಾ.ರಾಜ್ ಕುಮಾರ್ ಪುತ್ಥಳಿ ಕೆಡವಿದ ಬಿಬಿಎಂಪಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಪುನೀತ್ ರಾಜ್ಕುಮಾರ್ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ವರನಟನ ಪುತ್ಥಳಿಯನ್ನು ಸ್ಥಾಪಿಸಲಾಗಿತ್ತು. ರಾಜ್ ಕುಮಾರ್ ಪ್ರತಿಮೆಯನ್ನು ಚಿಕ್ಕಪೇಟೆಯಲ್ಲಿ ಅಭಿಮಾನಿಗಳು ಸ್ಥಾಪಿಸಿದ್ದರು. ಪುತ್ಥಳಿ ಸ್ಥಾಪಿಸಿದ ಒಂದೇ ದಿನದಲ್ಲಿ ಅದನ್ನು ಬಿಬಿಎಂಪಿ ಜೆಸಿಬಿ ತರಿಸಿ ತೆರವು ಮಾಡಿದೆ. ಪುತ್ಥಳಿ ನಿಲ್ಲಿಸಲು ಮಾಡಿಸಲಾಗಿದ್ದ ಸಿಮೆಂಟಿನ ಕಟ್ಟೆಯನ್ನು ಒಡೆದುಹಾಕಲಾಗಿದೆ.
ಪ್ರತಿಮೆ ತೆರವು ವಿರೋಧಿಸಿ ಕನ್ನಡಪರ ಹೋರಾಟಗಾರರಿಂದ ಇಂದು ಚಿಕ್ಕಪೇಟೆಯಲ್ಲಿ ಪ್ರತಿಭಟನೆ ನಡೆಯಲಿದೆ. “ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪುತ್ಥಳಿ ಸ್ಥಾಪಿಸಲಾಗಿತ್ತು. ಇದನ್ನು ತೆರವು ಮಾಡಿರುವುದು ಅನ್ಯಾಯ. ಇದು ಕನ್ನಡಿಗರನ್ನು ಕೆರಳಿಸುವ ಘಟನೆ. ಇದನ್ನು ವಿರೋಧಿಸಿ ಇಂದು ಪ್ರತಿಭಟನೆ ಮಾಡಲಿದ್ದೇವೆ” ಎಂದು ನಮ್ಮ ಕರ್ನಾಟಕ ಸೇನೆಯ ಯುವಘಟಕದ ಅಧ್ಯಕ್ಷರು ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ಸಾರ್ವಜನಿಕ ಸ್ಥಳದಲ್ಲಿ ಪುತ್ಥಳಿ ಸ್ಥಾಪನೆಗೆ ಅವರು ಅನುಮತಿ ಪಡೆದಿರಲಿಲ್ಲ. ಅನುಮತಿ ಇಲ್ಲದೆ ಇಂಥ ಪುತ್ಥಳಿ, ಪ್ರತಿಮೆ ಸ್ಥಾಪನೆ ಅನುಮತಿಸಲಾಗುವುದಿಲ್ಲ” ಎಂದು ಸ್ಥಳೀಯ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.