ಬೆಂಗಳೂರು:- ಲೋಕಸಭಾ ಚುನಾವಣೆ 2024 ರ ಹಿನ್ನೆಲೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಆಯ್ಕೆ ಇನ್ನೂ ಕಗ್ಗಂಟಾಗಿ ಉಳಿದಿದೆ.
ಮೊದಲ ಹಂತದಲ್ಲಿ 95 ಅಭ್ಯರ್ಥಿಗಳನ್ನ ಘೋಷಣೆ ಮಾಡಿರುವ ಕಾಂಗ್ರೆಸ್ ಇದೀಗ ಎರಡನೇ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ಇದಕ್ಕಾಗಿ ದೆಹಲಿಯಲ್ಲಿ ಸಭೆಗಳ ಮೇಲೆ ಸಭೆ ನಡೆಸುತ್ತಿದೆ. ಹೀಗಾಗಿ ಅದರಲ್ಲಿ ಭಾಗವಹಿಸುವುದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ದೆಹಲಿಗೆ ತೆರಳಲಿದ್ದಾರೆ.
ದೆಹಲಿಗೆ ತೆರಳುವ ಮುನ್ನ ಸಿಎಂ ಕೋಲಾರ ಅಭ್ಯರ್ಥಿ ಆಯ್ಕೆ ಬಗ್ಗೆ ಸಭೆ ನಡೆಸಿದ್ದಾರೆ. ಈ ವೇಳೆ ದಲಿತ ಬಲಗೈ ಸಮುದಾಯದ ಅಭ್ಯರ್ಥಿ ಕಣಕ್ಕಿಳಿಸುವಂತೆ ರಮೇಶ್ ಕುಮಾರ್ ಹಾಗೂ ತಂಡ ಅಭಿಪ್ರಾಯ ಇಟ್ಟಿದೆ. ಈ ಮೂಲಕ ದಲಿತ ಎಡಗೈ ಸಮುದಾಯದ ಕೆ.ಹೆಚ್.ಮುನಿಯಪ್ಪ ಮತ್ತವರ ಕುಟುಂಬದವರಿಗೆ ಟಿಕೆಟ್ ನೀಡದಂತೆ ಪರೋಕ್ಷವಾಗಿ ಹೇಳಿದೆ. ಅತ್ತ ಸ್ಪರ್ಧೆಗೆ ನಿರಾಸಕ್ತಿ ತೋರಿರೋ ಮುನಿಯಪ್ಪ, ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ಕೊಡಿಸೋಕೆ ಯತ್ನಿಸ್ತಿದ್ದಾರೆ. ಇದನ್ನ ಅರಿತೇ ರಮೇಶ್ ಕುಮಾರ್ ಅಭಿಪ್ರಾಯ ಮಂಡಿಸಿದ್ದಾರೆ. ಅತ್ತ ಕೆ.ಹೆಚ್.ಮುನಿಯಪ್ಪಗೆ ಕೈ ಹೈಕಮಾಂಡ್ ಬುಲಾವ್ ನೀಡಿದ್ದು, ನಿನ್ನೆಯೇ ದೆಹಲಿಗೆ ತೆರಳಿದ್ದಾರೆ.
ಇತ್ತ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಲೇಔಟ್ ಕೃಷ್ಣಪ್ಪ ಪುತ್ರ ಪ್ರಿಯಾಕೃಷ್ಣರನ್ನ ಕಣಕ್ಕಿಳಿಸಲು ಕೈ ನಾಯಕರು ಸರ್ಕಸ್ ನಡೆಸಿದ್ದಾರೆ.