ಬೆಂಗಳೂರು:– ಭಕ್ತಿ ಗೀತೆ ಹಾಕಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಕೇಸ್ ಗೆ ಸಂಬಂಧಿಸಿದಂತೆ FIR ದಾಖಲಾಗಿದೆ.
ಹಲಸೂರು ಗೇಟ್ ಪೊಲೀಸ್ ಠಾಣೆಗೆ ಮುಖೇಶ್ ದೂರು ನೀಡಿದ್ದು, ದೂರಿನನ್ವಯ ಪೊಲೀಸರು FIR ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 506, 504, 149, 307, 323 ಹಾಗೂ 324ರಡಿ ಐವರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಮುಕೇಶ್ ಮೇಲೆ ಹಲ್ಲೆ ಮಾಡಿದ್ದ ಸುಲೇಮಾನ್, ತರುಣ್ ಶನವಾಜ್, ರೋಹಿತ್, ಡ್ಯಾನಿಶ್ ವಿರುದ್ಧ ಕೇಸ್ ದಾಖಲಿಸಿದ್ದು, ಐವರ ಪೈಕಿ ಮೂವರನ್ನು ಬಂಧಿಸಿದ್ದಾರೆ.
ಘಟನೆ ಸ್ಥಳಕ್ಕೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಭೇಟಿ ನೀಡಿದ್ದಾರೆ. ಬಳಿಕ ಕುಟುಂಬಸ್ಥರ ಜೊತೆ ಮಾತುಕತೆ ಮಾಡಿದ್ದಾರೆ. ನಂತರ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದು, ‘ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವಾಗಿ ಜೋರಾಗಿ ಹಾಡು ಹಾಕಲು ಅವಕಾಶವಿಲ್ಲ ಎಂದು ತನ್ನ ಅಂಗಡಿಯಲ್ಲಿ ಭಜನೆ ನುಡಿಸುತ್ತಿದ್ದ ಹಿಂದೂ ಅಂಗಡಿಯವನ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ. ಇಂತಹ ಕೃತ್ಯಗಳಿಗೆ ಧೈರ್ಯ ತುಂಬಿರುವುದು ಕಾಂಗ್ರೆಸ್ ತುಷ್ಟೀಕರಣ ರಾಜಕಾರಣದ ನೇರ ಪರಿಣಾಮವಾಗಿದೆ. ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದವರಿಗೆ ಜಾಮೀನು ನೀಡಲಾಗಿತ್ತು’ ಎಂದಿದ್ದಾರೆ.
ರಾಜಕೀಯ ಬೆಂಬಲ ದೊರೆತಿರುವುದರಿಂದ ಸಹಜವಾಗಿಯೇ ನಮ್ಮ ರಾಜ್ಯದಲ್ಲಿ ಹಿಂದೂಗಳ ವಿರುದ್ಧ ಇಂತಹ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ತಪ್ಪು ನಿದರ್ಶನ ನೀಡುವುದನ್ನು ಸಿಎಂ ನಿಲ್ಲಿಸಬೇಕು. ಈ ಪ್ರಕರಣದಲ್ಲಿ ದುಷ್ಕರ್ಮಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ’ ಎಂಬುದನ್ನು ರಾಜ್ಯಕ್ಕೆ ತಿಳಿಸುವಂತೆ ಆಗ್ರಹಿಸಿದ್ದಾರೆ.