ಬಂಗಾರಪೇಟೆ ತಾಲ್ಲೂಕಿನ ಗಡಿ ಗ್ರಾಮಗಳಲ್ಲಿ ಒಂಟಿ ಆನೆಯ ಉಪಟಳ ಹೆಚ್ಚಾಗಿದ್ದು, ರೈತರು ಬೆಳೆದ ಅಫಾರ ಪ್ರಮಾಣದ ವಿವಿಧ ಬೆಳೆಗಳು ನಾಶವಾಗಿದ್ದು ಬೆಳೆ ಕಳೆದುಕೊಂಡ ರೈತರು ತಲೆಯ ಮೇಲೆ ಕೈ ಇಟ್ಟು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲ್ಲೂಕಿನ ಗಡಿಭಾಗದ ಅರಣ್ಯ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಒಂಟಿ ಕಾಡಾನೆ ಬೀಡು ಬಿಟ್ಟಿದ್ದು, ನಿತ್ಯ ಒಂದಲ್ಲಾ ಒಂದು ಕಾಡಂಚಿನ ಗ್ರಾಮದಲ್ಲಿ ಆನೆ ಕಾಣಿಸಿಕೊಂಡು ಜನರಲ್ಲಿ ಭಯ ಹುಟ್ಟಿಸುತ್ತಿದೆ. ಗುರುವಾರ ತಡರಾತ್ರಿ ದೋಣಿಮೊಡಗು ಮತ್ತು ಬಲಮಂದೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಡಿ ಗ್ರಾಮಗಳಲ್ಲಿ ಲಗ್ಗೆ ಇಟ್ಟು ರೈತರ ಬೆಳೆಗಳನ್ನು ನಾಶಮಾಡಿದೆ. ದಾಳಿಯಿಂದ ಕದಿರಿನತ್ತ ಗ್ರಾಮದ ರೈತರಾದ ಶ್ರೀರಾಂ, ವೆಂಕೋಬ್ ರಾವ್, ಸೋಮೋಜಿ ರಾವ್ ಸೇರಿದಂತೆ ಇತರೆ ರೈತರು ಬೆಳೆದಿದ್ದ ರಾಗಿ ಬೆಳೆಯನ್ನು ನಾಶಮಾಡಿದೆ. ಕನುಮನಹಳ್ಳಿ ಗ್ರಾಮದ ರೈತ ಪಾರಿರಾವ್ರವರ ರಾಗಿ ಬೆಳೆಯನ್ನು ನಾಶ ಮಾಡುವುದರ ಜೊತೆಗೆ ಬೋರ್ವೆಲ್ ಅನ್ನು ನಾಶಪಡಿಸಿದೆ. ಕೊಳಮೂರು ಗ್ರಾಮದ ರೈತ ಈಶ್ವರ್ ರಾವ್ ರವರಿಗೆ ಸೇರಿದ ಟೊಮ್ಯಾಟೊ ಮತ್ತು ಹನಿ ನೀರಾವರಿ ಪೈಪುಗಳು ಸೇರಿದಂತೆ ಇತರೆ ಬೆಳೆಗಳನ್ನು ನಾಶ ಮಾಡಿದ್ದು, ರೈತರಿಗೆ ಲಕ್ಷಾಂತರ ರೂ ನಷ್ಟ ಉಂಟಾಗಿದೆ.
ಬರಗಾಲದ ನಡುವೆ ಇರುವ ಅಲ್ಪಸ್ವಲ್ಪ ನೀರಿನಿಂದ ಸಾಲ ಸೋಲ ಮಾಡಿ ರೈತರು ಬೆಳೆ ಬೆಳೆದಿದ್ದಾರೆ. ಬೆಳೆ ಮನೆ ಸೇರುವುದಕ್ಕೆ ಮುಂಚೆ ಕಾಡಾನೆಗಳ ದಾಳಿಗೆ ಬೆಳೆ ನಾಶವಾಗುತ್ತಿರುವುದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಾಡಾನೆ ಬೆಳೆಗಳನ್ನು ನಾಶ ಮಾಡುತ್ತಿದ್ದರೂ ಸಹ ಅರಣ್ಯ ಇಲಾಖೆಯ ಸಿಬ್ಬಂದಿ ಆನೆಯನ್ನು ಕಾಡಿನತ್ತ ಓಡಿಸಲು ಮುಂದಾಗುತ್ತಿಲ್ಲ. ಬೆಳೆ ನಷ್ಟಕ್ಕೆ ಶೀಘ್ರವಾಗಿ ಬೆಳೆಪರಿಹಾರ ನೀಡಿ ರೈತರ ಕೈ ಹಿಡಿಯಬೇಕು ಎಂದು ಸಾರ್ವಜನಿಕರು ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.