ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿಗೆ ಪ್ರಶಸ್ತಿ ಎತ್ತಿಹಿಡಿದಿದೆ. ಮಹಿಳಾ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ RCB ಮಹಿಳಾ ಪಡೆ ಕಪ್ ಗೆದ್ದಿದೆ.
ಇನ್ನು ಈ ಸೀಸನ್ನಲ್ಲಿ ವಿವಿದ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದ ಆಟಗಾರ್ತಿಯರು ಯಾರ್ಯಾರು? ಅವರಿಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು ಎಂಬುದನ್ನು ನೋಡುವುದಾದರೆ…
ಕಳೆದ ಬಾರಿಯಂತೆ ಈ ಬಾರಿಯೂ ಚಾಂಪಿಯನ್ ತಂಡಕ್ಕೆ 6 ಕೋಟಿ ರೂಪಾಯಿಗಳನ್ನು ಬಹುಮಾನವನ್ನಾಗಿ ನೀಡಲಾಗಿದೆ. ಅಂದರೆ ಚಾಂಪಿಯನ್ ಆರ್ಸಿಬಿ ಟ್ರೋಫಿಯೊಂದಿಗೆ 6 ಕೋಟಿ ರೂಗಳನ್ನು ತನ್ನ ಖಾತೆಗೆ ಹಾಕಿಕೊಂಡು ಲೀಗ್ಗೆ ವಿದಾಯ ಹೇಳಿದೆ.
ಫೈನಲ್ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಮುಗ್ಗರಿಸಿ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟದಿಂದ ವಂಚಿತವಾದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಳೆದ ಬಾರಿಯಂತೆ ಈ ಬಾರಿಯೂ ರನ್ನರ್ಅಪ್ಗೆ ತೃಪ್ತಿಪಟ್ಟಿದ್ದು, 3 ಕೋಟಿ ರೂಗಳನ್ನು ತನ್ನ ಖಾತೆಗೆ ಹಾಕಿಕೊಂಡಿದೆ
ಟೂರ್ನಿಯಲ್ಲಿ ಮೂರನೇ ಸ್ಥಾನ ಪಡೆದ ಮುಂಬೈ ಇಂಡಿಯನ್ಸ್ ತಂಡಕ್ಕೆ 1 ಕೋಟಿ ರೂಗಳನ್ನು ಬಹುಮಾನವನ್ನಾಗಿ ಪಡೆದಿದೆ. ಫೈನಲ್ಗೂ ಮುನ್ನ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಇದೇ ಆರ್ಸಿಬಿ ಎದುರು ಮುಂಬೈ ತಂಡ ಸೋತು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಇನ್ನು ವೈಯಕ್ತಿಕ ಪ್ರದರ್ಶನಕ್ಕೆ ಸಂದ ಪ್ರಶಸ್ತಿಗಳ ಬಗ್ಗೆ ಗಮನಹರಿಸುವುದಾದರೆ.. ಟೂರ್ನಿಯಲ್ಲಿ ಆಡಿದ 9 ಪಂದ್ಯಗಳಲ್ಲಿ 347 ರನ್ ಕಲೆಹಾಕಿದ ಎಲ್ಲಿಸ್ ಪೆರ್ರಿ ಟೂರ್ನಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡರು. ಈ ಮೂಲಕ ಆರೆಂಜ್ ಕ್ಯಾಪ್ ಗೆದ್ದ ಎಲ್ಲಿಸ್ ಪೆರ್ರಿಗೆ 5 ಲಕ್ಷ ರೂಗಳನ್ನು ಬಹುಮಾನವನ್ನಾಗಿ ನೀಡಲಾಯಿತು.
ಹಾಗೆಯೇ ಬೌಲಿಂಗ್ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಕನ್ನಡತಿ ಶ್ರೇಯಾಂಕ ಪಾಟೀಲ್ ಇಡೀ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಇದರೊಂದಿಗೆ ಪರ್ಪಲ್ ಕ್ಯಾಪ್ ಕೂಡ ಗೆದ್ದರು. ಟೂರ್ನಿಯಲ್ಲಿ ಆಡಿದ 9 ಪಂದ್ಯಗಳಿಂದ 13 ವಿಕೆಟ್ ಉರುಳಿಸಿದ ಶ್ರೇಯಾಂಕಗೆ 5 ಲಕ್ಷ ರೂ ಬಹುಮಾನ ಸಿಕ್ಕಿತು.
ಇದಲ್ಲದೆ ಟೂರ್ನಿಯುದ್ದಕ್ಕೂ ಬೌಲಿಂಗ್ ಹಾಗೂ ಬ್ಯಾಟಿಂಗ್ ಇದರ ಜೊತೆಗೆ ಫೀಲ್ಡಿಂಗ್ನಲ್ಲಿ ಅಪ್ರತಿಮ ಪ್ರದರ್ಶನ ನೀಡಿದ ಶ್ರೇಯಾಂಕ ಪಾಟೀಲ್ ಎರಡನೇ ಆವೃತ್ತಿಯ ಉದಯೋನ್ಮುಖ ಪ್ಲೇಯರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.