ಕನ್ನಡದ ಹುಡುಗಿ, ಬಾಲಿವುಡ್ ಬೆಡಗಿ ನಟಿ ದೀಪಿಕಾ ಪಡುಕೋಣೆ ಗರ್ಭಿಣಿಯಾಗಿದ್ದು ಸದ್ಯ ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಈ ಮಧ್ಯೆ ದೀಪಿಕಾ ಎಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಎಂಬ ಸುದ್ದಿ ಹರಿದಾಡಿದ್ದು ಅದಕ್ಕೀಗ ಉತ್ತರ ಸಿಕ್ಕಿದೆ.
ದೀಪಿಕಾ ತಮ್ಮ ತವರು ಮನೆಯಾದ ಬೆಂಗಳೂರಿನಲ್ಲಿಯೇ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ದೀಪಿಕಾ ಮಗು ಆಗುವವರೆಗೂ ಅವರು ತಮ್ಮ ಬಹುತೇಕ ಸಮಯವನ್ನು ಬೆಂಗಳೂರಿನಲ್ಲಿಯೇ ಕಳೆಯಲಿದ್ದಾರೆ.
14 ನವೆಂಬರ್ 2018ರಲ್ಲಿ ಮದುವೆಯಾದ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಮದುವೆಯಾದ ಆರು ವರ್ಷಗಳ ಬಳಿಕ ಪೋಷಕರಾಗುತ್ತಿದ್ದಾರೆ. ಇತ್ತೀಚೆಗಷ್ಟೆ ದೀಪಿಕಾ ಪಡುಕೋಣೆ ಗರ್ಭಿಣಿ ಆಗಿರುವ ವಿಷಯವನ್ನು ರಣ್ವೀರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಆಲಿಯಾ ಭಟ್, ಕರೀನಾ ಕಪೂರ್ ಇನ್ನೂ ಹಲವು ತಾರೆಯರು ಮುಂಬೈನಲ್ಲಿಯೇ ತಾಯಿಯಾದರು. ಮುಂಬೈನ ಪ್ರತಿಷ್ಠಿತ ಆಸ್ಪತ್ರೆ ಕೋಕಿಲಾ ಬೆನ್ನ ವೈದ್ಯರ ನೆರವನ್ನು ಪಡೆದುಕೊಂಡರು. ಆದರೆ ದೀಪಿಕಾ ಪಡುಕೋಣೆ ಇದೀಗ ಬೆಂಗಳೂರಿನಲ್ಲಿಯೇ ತಾಯಿಯಾಗಲು ನಿರ್ಧರಿಸಿದ್ದಾರೆ. ಇಲ್ಲಿನ ಪ್ರತಿಷ್ಠಿತ ಆಸ್ಪತ್ರೆ ಹಾಗೂ ವೈದ್ಯರುಗಳ ನೆರವನ್ನು ಪಡೆದುಕೊಳ್ಳಲಿದ್ದಾರೆ. ಯಾವ ಆಸ್ಪತ್ರೆ, ಯಾವ ವೈದ್ಯರು ದೀಪಿಕಾ ಪಡುಕೋಣೆಯ ಹೆರಿಗೆ ಮಾಡಿಸಲಿದ್ದಾರೆ ಎಂಬುದು ಬಹಿರಂಗವಾಗಿಲ್ಲ.
ಬೆಂಗಳೂರು ದೀಪಿಕಾ ಪಡುಕೋಣೆಗೆ ತವರೂರಾಗಿದ್ದು, ಇಲ್ಲಿಯೇ ಮಗುವಿಗೆ ಜನ್ಮ ನೀಡಲು ದೀಪಿಕಾ ನಿಶ್ಚಯಿಸಿದ್ದಾರೆ. ಇಂದಿರಾ ನಗರದಲ್ಲಿ ದೀಪಿಕಾ ಪಡುಕೋಣೆ ಮನೆಯಿದ್ದು, ಇಲ್ಲಿಯೇ ಅವರು ಹಲವು ತಿಂಗಳುಗಳ ಕಾಲ ಸಮಯ ಕಳೆಯಲಿದ್ದಾರೆ. ಸದ್ಯ ದೀಪಿಕಾ ಪಡುಕೋಣೆ ಪ್ರಭಾಸ್ ನಟನೆಯ ‘ಕಲ್ಕಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಅನ್ನು ಬಹುತೇಕ ಮುಗಿಸಿದ್ದಾರೆ. ಇದರ ಜೊತೆಗೆ ‘ಸಿಂಘಂ ಅಗೇನ್’ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಪ್ರಾರಂಭವಾಗಿದ್ದು, ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ದೀಪಿಕಾ ಕಾಣಿಸಿಕೊಂಡಿದ್ದಾರೆ. ಇದೀಗ ದೀಪಿಕಾ ಗರ್ಭಿಣಿ ಆಗಿರುವ ಕಾರಣ ಸಿನಿಮಾವನ್ನು ಸದ್ಯದ ಮಟ್ಟಿಗೆ ಹೋಲ್ಡ್ ಮಾಡಲಾಗಿದೆ.