ಹಾವೇರಿ: ಮೋದಿಯವರು ಬಂದು ಹೋದ ಮೇಲೆ ದೊಡ್ಡ ಸಂಚಲನ ಸೃಷ್ಟಿಯಾಗಿದೆ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು. ಹಾನಗಲ್ನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಬೊಮ್ಮಾಯಿ ಅವರು, ನಿರೀಕ್ಷೆ ಮೀರಿ ಜನರು ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಬೆಂಬಲ ನೀಡದ ಜನರೂ ಈಗ ಬೆಂಬಲಿಸುತ್ತಿದ್ದಾರೆ.
ಬಿಜೆಪಿ ಅಲೆ ಇಡೀ ಕರ್ನಾಟಕದಲ್ಲಿ ಇದೆ. ನಿನ್ನೆ ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಹೋದ ನಂತರ ರಾಜ್ಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ಅವರು ನಾಳೆ ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದು, ಇನ್ನೂ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ನಾಮಪತ್ರ ಸಲ್ಲಿಸುವ ಪೂರ್ವದಲ್ಲಿ ಮತ್ತು ನಂತರ ಪ್ರಧಾನಿ ಮೋದಿ ಬಂದು ಹೋಗುವುದರಿಂದ ಬಿಜೆಪಿ ಅಭ್ಯರ್ಥಿಗಳಿಗೆ ಮತದಾರರಿಂದ ದೊಡ್ಡ ಪ್ರಮಾಣದ ಬೆಂಬಲ ಮತದಾರರರಿಂದ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಮಗೆ ಬೇಕಾದಂತೆ ಚುನಾವಣೆ ವೇಳಾಪಟ್ಟಿ ಮಾಡಿಕೊಂಡಿದ್ದಾರೆ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಕ್ಕೆ ಪ್ರತಿಕ್ರಿಯಿಸಿ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಕಾನೂನು ಸುವ್ಯವಸ್ಥೆ ಕಾಪಾಡುವ ಅವಶ್ಯಕತೆ ಇದೆ. ಭದ್ರತಾ ಪಡೆಗಳ ಮೂವ್ಮೆಂಟ್ಗೆ ಸಮಯ ಬೇಕಾಗುತ್ತದೆ. ಕಳೆದ ಎರಡು ಬಾರಿಯೂ 7 ಹಂತದಲ್ಲಿ ಚುನಾವಣೆ ನಡೆದಿದೆ. ಸುಮ್ಮನೆ ಅವರು ರಾಜಕೀಯ ವಿಶ್ಲೇಷಣೆ ಮಾಡುವ ರೀತಿ ಹೇಳುತ್ತಾರೆ, ಅದಕ್ಕೆ ಅರ್ಥ ಇಲ್ಲ ಎಂದು ಟಾಂಗ್ ಕೊಟ್ಟರು.