IPL ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ತನ್ನ ತವರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಲಿರುವ ಮೊದಲ 3 ಪಂದ್ಯಗಳ ಆನ್ಲೈನ್ ಟಿಕೆಟ್ ಮಾರಾಟ ಪ್ರಕ್ರಿಯೆಯನ್ನು ಆರಂಭಿಸಿದೆ.
ಗುರುವಾರ ರಾತ್ರಿ ಆರಂಭಗೊಂಡ ಪ್ರಕ್ರಿಯೆಗೆ ತಕ್ಷಣದಿಂದಲೇ ಭಾರಿ ಸ್ಪಂದನೆ ದೊರೆತಿದ್ದು, ಟಿಕೆಟ್ ಖರೀದಿಗೆ ಲಾಂತರ ಅಭಿಮಾನಿಗಳು ಒಮ್ಮೆಲೆ ಮುಗಿಬಿದ್ದ ಕಾರಣ ಟಿಕೆಟ್ ಮಾರಾಟದ ವೆಬ್ಸೈಟ್ ಕೆಲಕಾಲ ಕ್ರಾಷ್ ಆಗಿತ್ತು.
ನಂತರ ಅಭಿಮಾನಿಗಳು ಆನ್ಲೈನ್ನಲ್ಲಿ ದೊಡ್ಡ ಕ್ಯೂನಲ್ಲಿ ಹೋದರೂ, ಒಟಿಪಿ, ಸೀಟು ಸಮಸ್ಯೆಯಿಂದಾಗಿ ಟಿಕೆಟ್ ಖರೀದಿಗೆ ಪರದಾಡುವಂತಾಯಿತು. ಇದರ ಜತೆಗೆ ಟಿಕೆಟ್ಗಳ ದುಬಾರಿ ಬೆಲೆಯೂ ಜನಸಾಮಾನ್ಯ ಅಭಿಮಾನಿಗಳು ಬೇಸರಪಡುವಂತೆ ಮಾಡಿದೆ.
ಮಾರ್ಚ್ 25ಕ್ಕೆ ಪಂಜಾಬ್ ಕಿಂಗ್ಸ್, ಮಾರ್ಚ್ 29ಕ್ಕೆ ಕೆಕೆಆರ್ ಮತ್ತು ಏಪ್ರಿಲ್ 2ಕ್ಕೆ ಲಖನೌ ಸೂಪರ್ಜೈಂಟ್ಸ್ ವಿರುದ್ಧ ನಡೆಯಲಿರುವ ಮೊದಲ 3 ಪಂದ್ಯಗಳ ಕನಿಷ್ಠ ಟಿಕೆಟ್ ಬೆಲೆ 2,300 ರೂ. ಆಗಿದ್ದರೆ, ಗರಿಷ್ಠ 43,350 ರೂ. ಬೆಲೆ ಇದೆ. 16 ಆವೃತ್ತಿಗಳಲ್ಲಿ ಒಂದು ಬಾರಿಯೂ ಪ್ರಶಸ್ತಿ ಗೆಲ್ಲದ ತಂಡ ಇಷ್ಟೊಂದು ದುಬಾರಿ ಬೆಲೆ ನಿಗದಿಪಡಿಸಿದ್ದರೆ, 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ಕಿಂಗ್ಸ್ ತಂಡ ತನ್ನ ತವರಿನ ಪಂದ್ಯಗಳ ಕನಿಷ್ಠ ಬೆಲೆಯ ಟಿಕೆಟ್ಗಳನ್ನು 500 ರೂ.ಗೆ ನೀಡುತ್ತಿದೆ. ಅಭಿಮಾನಿಗಳಿಂದ ಅತಿ ಹೆಚ್ಚು ಪ್ರೀತಿ ಸಂಪಾದಿಸುವ ಆರ್ಸಿಬಿ ತಂಡ ಅವರನ್ನೇ ಲೂಟಿ ಮಾಡಲು ಹೊರಟಿರುವ ನಡೆ ವ್ಯಾಪಕವಾಗಿ ಟೀಕೆಗೆ ಗುರಿಯಾಗಿದೆ ಎಂದು ಹೇಳಲಾಗಿದೆ.