ಮಂಡ್ಯ:- ಜನರ ಋಣ ತೀರಿಸಿದ ಮೇಲೆ ನನ್ನ ಜೀವ ಮಣ್ಣಿಗೆ ಹೋಗತ್ತೆ ಎಂದು ಹೇಳುವ ಮೂಲಕ HD ಕುಮಾರಸ್ವಾಮಿ ಭಾವುಕರಾಗಿದ್ದಾರೆ.
ಜಿಲ್ಲೆಯಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜನರ ಋಣ ತೀರಿಸಿದ ಮೇಲೆ ಈ ಜೀವ ಮಣ್ಣಿಗೆ ಹೋಗುತ್ತೆ. ಅಲ್ಲಿಯವರೆಗೆ ನಾನು ಮಣ್ಣಿಗೆ ಹೋಗುವುದಿಲ್ಲ. H.D.ದೇವೇಗೌಡರು ಜ್ಯೋತಿಷಿಗಳ ಮಾತು ಕೇಳಿ ಬದುಕಿದ್ದಾರೆ ಎಂದು ಹೇಳಿದ್ದಾರೆ.
ನಾನು ರಾಜಕೀಯ ಕ್ಷೇತ್ರಕ್ಕೆ ಬರಬೇಕು ಅಂದುಕೊಂಡವನಲ್ಲ. ಸಿನಿಮಾ ಹಂಚಿಕೆದಾರನಾಗಿದ್ದೆ, ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ. ನಾನು ಮಂಡ್ಯ ಜಿಲ್ಲೆಯ ಜನರ ಜೊತೆ ಮೊದಲಿನಿಂದಲೂ ಇದ್ದೇನೆ. 2019ರ ಚುನಾವಣೆಯಲ್ಲಿ ಹೊಂದಾಣಿಕೆ ಎಂದು ಕುತ್ತಿಗೆ ಕೊಯ್ದರು. ಅದಕ್ಕೆ ಉತ್ತರ ಕೊಡುವ ಶಕ್ತಿ ಮಂಡ್ಯ ಜನರ ಕೈಯಲ್ಲಿದೆ ಎಂದರು.
ಜನ್ಮ ಭೂಮಿ ಹಾಸನ, ರಾಜಕೀಯ ಭವಿಷ್ಯ ನೀಡಿದ್ದು ರಾಮನಗರ. ಆದರೆ ನನ್ನ ಜೀವ ಮಿಡಿಯುವುದು ಮಂಡ್ಯಕ್ಕಾಗಿ. ಸ್ವಾಭಿಮಾನ ಎನ್ನುವುದು ಮಾತಿನಲ್ಲಿ ಅಲ್ಲ, ಕೆಲಸದಲ್ಲಿರಬೇಕು. ನಾಟಿ ಸ್ಟೈಲ್ ಅಂತಾರೆ, ದುಡ್ಡಿನಿಂದ ರಾಜಕೀಯ ಮಾಡೋದಲ್ಲ. ಈ ಚುನಾವಣೆ ಕೆಲವರಿಗೆ ಕಲೆಕ್ಷನ್ ಮಾಡಿಕೊಳ್ಳಲು ಒಳ್ಳೆ ಅವಕಾಶ ಎಂದು ಹೇಳಿದ್ದಾರೆ.
ಮಂಡ್ಯ ಜಿಲ್ಲೆಗೆ 9 ಸಾವಿರ ಕೋಟಿ ರೂ. ಅಭಿವೃದ್ಧಿ ಕೊಡಲು ನಾವು ಹೋದಾಗ ಏನೇನು ಆಯ್ತು ಎನ್ನೋದು ಎಲ್ಲರಿಗೂ ಗೊತ್ತು. ಮಂಡ್ಯ ಜಿಲ್ಲೆಗೆ ಅನ್ಯಾಯವಾಗಿದೆ. ನಾನು ದೇವೇಗೌಡರು ಅಧಿಕಾರದಲ್ಲಿ ಇದ್ದದ್ದು ಕೆಲ ವರ್ಷ ಮಾತ್ರ. ನನ್ನ ಕೈಯಲ್ಲಿ ಐದು ವರ್ಷ ಅಧಕಾರ ಇದ್ದಿದರೆ ಮಂಡ್ಯ ಅಭಿವೃದ್ಧಿಯ ಕಥೆಯೇ ಬೇರೆ ಎಂದು ಹೇಳಿದ್ದಾರೆ.
ಈಗ ಕಾಂಗ್ರೆಸ್ ಅವರು ದೇವೇಗೌಡರ ಕುಟುಂಬದ ಗುಲಾಮರಾಗುವುದು ಬೇಡ ಅಂತಾ ಹೇಳುತ್ತಾರೆ. ನಾವು ರಾಮನಗರ ಜನರನ್ನು ಗುಲಾಮರನ್ನಾಗಿ ಮಾಡಿಕೊಂಡಿಲ್ಲ. ನಾವು ಅವರ ಸೇವಕರಾಗಿದ್ದೇವೆ. ರಾಮನಗರ ಜನರನ್ನು ಗುಲಾಮರನ್ನಾಗಿ ಕಾಣೋದು ಕಾಂಗ್ರೆಸ್ ಅವರು. ಮಾವನನ್ನೇ ಯಾವಮಾರಿಸಿದ ಚತುರ ಅಳಿಯ ಅಂತಾರೆ ಆ ಮಹಾನುಭಾವ. ಪಾಪ ಡಾ.ಮಂಜುನಾಥ್ ಎಷ್ಟೋ ಜನರ ಪ್ರಾಣ ಉಳಿಸಿದ್ದಾರೆ. ಅಂತವರಿಗೆ ಲಘುವಾಗಿ ಇವರು ಮಾತಾಡುತ್ತಿದ್ದಾರೆ. ಇವರು ಕಮಿಷನ್ ಪಡೆದು ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.